ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘ (ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನ ಸಂಸ್ಥೆ) ವತಿಯಿಂದ ಕೊಡಮಾಡುವ ಪ್ರತಿಷ್ಠಿತ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರತಿಕೋದ್ಯಮ ಪ್ರಶಸ್ತಿಗೆ ಈ ಬಾರಿ ಖ್ಯಾತ ಸಾಹಿತಿ, ಪತ್ರಕರ್ತ ಜೋಗಿ ಆಯ್ಕೆಯಾಗಿದ್ದಾರೆ. ಆ.೫ರಂದು ಬ್ರಹ್ಮಾವರ ಬಂಟರ ಭವನದಲ್ಲಿ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ‍್ಯ ಕೋಟದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಡ್ಡರ್ಸೆ ರಘುರಾಮ ಶೆಟ್ಟಿಯವರು ಪತ್ರಿಕೋದ್ಯಮವನ್ನು ಸಮಾಜಶಾಸ್ತ್ರೀಯ ದೃಷ್ಠಿಕೋನದೊಂದಿಗೆ ಕಂಡವರು ಹಾಗೂ ‘ಮುಂಗಾರು’ ಪತ್ರಿಕೆಯನ್ನ ಮುನ್ನೆಡೆಸಿ ನೂರಾರು ಯುವ ಪತ್ರಕರ್ತರನ್ನ ರೂಪುಗೊಳಿಸಿದವರು. ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ ಪತ್ರಿಕೆಯಲ್ಲಿ ಸುಧೀರ್ಘ ಕಾಲ ಪತ್ರಕರ್ತರಾಗಿ ದುಡಿದಿದ್ದಾರೆ. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಿಕರ್ತರ ಸಂಘದ ರಾಜ್ಯಾಧ್ಯಕ್ಷರಾಗಿ ಕೂಡ ಕಾರ‍್ಯ ನಿರ್ವಹಿಸಿದ್ದಾರೆ. ಆದ್ದರಿಂದ ಕಳೆದ ಎರಡು ವರ್ಷದಿಂದ ಇವರ ಹೆಸರಿನಲ್ಲಿ ಬ್ರಹ್ಮಾವರ ಪತ್ರಕರ್ತರ ಸಂಘ ಪತ್ರಿಕೋದ್ಯಮ ಕ್ಷೇತ್ರದಲ್ಲಿ ದುಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಈ ಹಿಂದೆ ಸುವರ್ಣ ನ್ಯೂಸ್‌ನ ಕವರ್ ಸ್ಟೋರಿ ಖ್ಯಾತಿಯ ವಿಜಯಲಕ್ಷ್ಮಿ ಶಿಬರೂರ್, ಹಾಯ್ ಬೆಂಗಳೂರ್ ಸಂಪಾದಕ ಪ್ರಖ್ಯಾತ ಸಾಹಿತಿ ರವಿ ಬೆಳಗೆರೆ ಈ ಪ್ರಶಸ್ತಿಗೆ ಭಾಜನರಾಗಿದ್ದರು ಎಂದರು.
ಈ ಬಾರಿ ಪ್ರಶಸ್ತಿಗೆ ಆಯ್ಕೆಯಾಗಿರುವ ಜೋಗಿ ಅವರ ಮೂಲ ಹೆಸರು ಗಿರೀಶ್ ರಾವ್ ಹತ್ವಾರ್. ಇವರು ಜಾನಕಿ ಕಾಲಂ ಅಂಕಣದ ವಿಭಿನ್ನಶೈಲಿಯ ಕಥನ, ಕಾದಂಬರಿಗಳ ಮೂಲಕ ಹಾಗೂ ಪತ್ರಕರ್ತರಾಗಿ ಪ್ರಖ್ಯಾತರಾದವರು ಎಂದು ಕಾರ್ಯಕ್ರಮದ ಸಂಚಾಲಕ ವಸಂತ್ ಗಿಳಿಯಾರ್ ತಿಳಿಸಿದರು. ಸಂಘದ ಕಾರ್ಯದರ್ಶಿ ರಾಜೇಶ ಗಾಣಿಗ ಅಚ್ಲಾಡಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.