ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಮಲ್ಲೇಶ್ವರಂನ ಗಾಂಧಿ ಸಾಹಿತ್ಯ ಸಂಘದ ಸಭಾಭವನದಲ್ಲಿ ಹೆಗ್ಗದ್ದೆ ಪ್ರಕಾಶನದ ೫ನೇ ಕೃತಿ, ಕವಿ ಶಂಕರ್ ಶೆಟ್ಟಿ ಕೊತ್ತಾಡಿಯವರು ಬರೆದ ’ಪದಕೊಂಡಿ’ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ಮತ್ತು ಅಧ್ಯಕ್ಷತೆಯನ್ನು ಆಧ್ಯಾತ್ಮ ಚಿಂತಕರು ಶ್ರೀ ವಿಶ್ವನಾಥ ಗುರೂಜಿ ವಹಿಸಿದ್ದರು.
ಸಿನಿ ಸಾಹಿತಿ ಡಾ| ವಿ. ನಾಗೇಂದ್ರ ಪ್ರಸಾದ್ ಕೃತಿ ಬಿಡುಗಡೆಗೊಳಿಸಿ, ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಕವಿ ಇರುತ್ತಾನೆ, ಹಲವರು ಪುಸ್ತಕದಲ್ಲಿ ಬರೆದರೆ, ಇನ್ನೂ ಹಲವರು ಮುಖ ಪುಸ್ತಕದಲ್ಲಿ ಬರೆಯುತ್ತಾರೆ. ಮೊದಲು ಪುಟದಲ್ಲಿ ಬರೆಯುವ ಅಭ್ಯಾಸ ಮಾಡಿಕೊಳ್ಳಿ, ’ನಿನ್ನ ಅಂಗಿಯ ಬೆವರಿನಲ್ಲಿ ನಮ್ಮ ಅನ್ನ ಅಡಗಿದೆ’ ಎಂಬ ಉತ್ತಮ ಸಂದೇಶ ಭರಿತ ಸಂಕಲನದಲ್ಲಿ ಪ್ರೀತಿ, ನೋವು, ಹಾರೈಕೆ ಎಲ್ಲವೂ ಇದೆ, ಈ ರೀತಿಯ ಚುಟುಕುಗಳು ಇನ್ನೂ ಬರಲಿ. ಶಂಕರ್ ಶೆಟ್ಟಿಯವರ ಈ ಕೊಡುಗೆ ಇನ್ನಷ್ಟು ಹೆಚ್ಚಲಿ ಎಂದು ಹಾರೈಸಿದರು. ಸಭೆಯ ಮಧ್ಯೆ ಸಹಕಾರ ನೀಡಿದವರಿಗೆ ಗೌರವಾರ್ಪಣೆ ಮಾಡಿದ ಸಾಹಿತಿ, ಪತ್ರಕರ್ತ ಜೋಗಿ ಮಾತನಾಡಿ, ಕವಿಯು ತನ್ನ ಕವಿತೆಯಲ್ಲಿ ಹಾಸ್ಯ ಪ್ರಧಾನವಾದ, ಭಾವ ಪ್ರಧಾನವಾದ ಪುರಾಣ ಪ್ರಧಾನವಾದ ಕವಿತೆಗಳನ್ನು ಹೊರಹಾಕುತ್ತಾನೆ. ಅನೇಕ ಕೆಲಸದ ನಡುವೆಯು ಸಾಹಿತ್ಯ ಪ್ರೇಮ ಇಟ್ಟು ಶಂಕರ್ ಅನಿಸಿದ್ದನ್ನು ಬರೆದು ಕವಿಯಾಗಿ, ಸಂಕಲನವನ್ನು ನಿಮ್ಮ ಮುಂದಿಟ್ಟಿದ್ದಾರೆ. ’ಹೆಗ್ಗದ್ದೆ ಪ್ರಕಾಶನ’ ಈ ರೀತಿಯ ಹೊಸ ಬರವಣಿಗೆಗಾರರಿಗೆ ಅವಕಾಶವೀಯುತ್ತಿರುವುದು ಅಭಿನಂದನಾರ್ಹ ಎಂದು ಆಶಿಸಿದರು.
ಹೆಗ್ಗದ್ದೆ ದಂಪತಿಗಳಿಗೆ ಸನ್ಮಾನಿಸಿದ ಹಿರಿಯ ಸಾಹಿತಿ ಜರಗನಹಳ್ಳಿ ಶಿವಶಂಕರ್ ಮಾತನಾಡಿ, ವಡ್ಡರ್ಸೆ ಅಂದಾಗಲೇ ಮನಸ್ಸಲ್ಲೇನೋ ಅನಿಸಿತು. ವಡ್ಡರ್ಸೆಗೂ ಸಾಹಿತ್ಯಕ್ಕೂ ಅವಿನಾಭಾವ ಸಂಬಂಧವಿದೆ, ಹೆಣ್ಣೊಬ್ಬಳು ತಾಯ್ತನ ಪಡೆಯಲು ಒಂದು ಮಗು ಅತ್ತರೆ ಸಾಕು, ಹಾಗೆ ನಿಮ್ಮ ಮೊದಲ ಪುಸ್ತಕದಿಂದಲೇ ನೀವು ಕವಿಯಾದಿರಿ. ನಿಮ್ಮ ಸಾಹಿತ್ಯ ಬೆಳವಣಿಗೆ ಪ್ರಸ್ತುತ ಯುವ ಜನತೆಗೆ ಮಾದರಿ ಎಂದು ಶುಭ ಹಾರೈಸಿದರು.
ಅಧ್ಯಕ್ಷೀಯ ಮಾತುಗಳನ್ನಾಡಿದ ವಿಶ್ವನಾಥ ಗುರೂಜಿ, ಆಧ್ಯಾತ್ಮದ ಬಗ್ಗೆ ಒಲವು ಇದ್ದ ನನಗೆ ಸಾಹಿತ್ಯದ ರಥಯಾತ್ರೆಗೆ ಕರೆದ್ದೀರಿ, ನನಗೂ ಕವಿತೆಗಳೆಂದರೆ ಇಷ್ಟ. ಈ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿತ್ತ ಪ್ರಕಾಶಕರಿಗೆ, ಲೇಖಕರಿಗೆ ಶುಭವಾಗಲಿ. ನಿಮ್ಮ ಕನ್ನಡ ಪ್ರೇಮ ಹಾಗೂ ಸಾಹಿತ್ಯ ಸೇವೆ ಅಜರಾಮರವಾಗಿರಲಿ ಎಂದು ಆಶೀರ್ವದಿಸಿದರು.
ಪ್ರಾಸ್ತಾವಿಕ ಮಾತುಗಳನ್ನು ಕವಿ ಶಂಕರ್ ಶೆಟ್ಟಿ ಕೊತ್ತಾಡಿಯವರು ಮತ್ತು ಕೃತಿ ಪರಿಚಯವನ್ನು ಪ್ರಕಾಶಕರಾದ ಸಂದೀಪ್ ಶೆಟ್ಟಿ ಹೆಗ್ಗದ್ದೆ ಮಾಡಿದರು. ಅನೇಕ ಸಾಹಿತ್ಯಾಭಿಮಾನಿಗಳು ಸೇರಿದ್ದ ಕಾರ್ಯಕ್ರಮದಲ್ಲಿ ಪುಸ್ತಕವನ್ನು ತನ್ನ ತಾಯಿಗೆ ಅರ್ಪಿಸಿದ ಕವಿ ಅತಿಥಿಗಳ ಅಮೃತಹಸ್ತದಿಂದ ತಾಯಿಗೆ ಸನ್ಮಾನಿಸಿದರು. ಹೆಗ್ಗದ್ದೆ ದಂಪತಿಗಳಿಗೂ ಗೌರವಿಸುದರ ಜೊತೆಗೆ ಸಹಕಾರ ನೀಡಿದವರಿಗೂ ಕಿರು ಕಾಣಿಕೆ ನೀಡಲಾಯಿತು. ರಾಮ ಶೆಟ್ಟಿ ಅತ್ತ್ತಿಕಾರ್ ಕಾರ್ಯಕ್ರಮಕ್ಕೆ ಸ್ವಾಗತಿಸುದರ ಜೊತೆಗೆ ಕಾರ್ಯಕ್ರಮ ನಿರ್ವಹಿಸಿದರು. ಧನ್ಯವಾದವನ್ನು ಮಂಜುನಾಥ ಶೆಟ್ಟಿ ಗೈದರು.