ಕುಂದಾಪ್ರ ಡಾಟ್ ಕಾಂ ಸುದ್ದಿ
ಪರಸ್ತ್ರೀಯೊಂದಿಗಿನ ಪ್ರೇಮ ಪ್ರಸಂಗದಿಂದ ತನ್ನದೇ ಮಕ್ಕಳಿಬ್ಬರಿಗೆ ವಿಷವುಣಿಸಿ ಕೊಂದ ತಂದೆ, ಬೈಂದೂರು ಗಂಗನಾಡುಗೋಳಿ ಕಕ್ಕಾರಿನ ಶಂಕರನಾರಾಯಣ ಹೆಬ್ಟಾರ್ (48)ಗೆ ಗಲ್ಲು ಶಿಕ್ಷೆ ವಿಧಿಸಿ ಕುಂದಾಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾ| ಪ್ರಕಾಶ್ ಖಂಡೇರಿ ಶನಿವಾರ ಮಹತ್ವದ ತೀರ್ಪು ನೀಡಿದ್ದಾರೆ.
ಜ. 3ರಂದು ಆರೋಪ ಸಾಬೀತಾಗಿದ್ದು, ಜ. 7ಕ್ಕೆ ತೀರ್ಪನ್ನು ಮುಂದೂಡಿದ್ದರು. ಬಳಿಕ ಮತ್ತೆ ನ್ಯಾಯಾಧೀಶರು ಅದನ್ನು ಜ. 19ಕ್ಕೆ ಮುಂದೂಡಿದ್ದರು. ಹಿರಿಯಡಕದ ಜಿಲ್ಲಾ ಕಾರಾಗೃಹದಲ್ಲಿದ್ದ ಅಪರಾಧಿಯನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಇದು ಕುಂದಾಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಧಿಸುತ್ತಿರುವ 3ನೇ ಮರಣದಂಡನೆ ತೀರ್ಪಾಗಿದೆ.
ಪ್ರಕರಣದ ಹಿನ್ನೆಲೆ
2016ರ ಅ. 16ರಂದು ಪರಸ್ತ್ರೀ ವ್ಯಾಮೋಹದಿಂದ ಶಂಕರನಾರಾಯಣನು ತನ್ನಿಬ್ಬರು ಮಕ್ಕಳು ಮತ್ತು ಪತ್ನಿಗೆ ವಿಷ ನೀಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ. ಪರಿಣಾಮ ಮಕ್ಕಳಾದ ಅಶ್ವಿನ್ ಕುಮಾರ್ ಹೆಬ್ಟಾರ್ (15) ಹಾಗೂ ಐಶ್ವರ್ಯಾ ಲಕ್ಷ್ಮೀ ಹೆಬ್ಟಾರ್ (13) ಸಾವಿಗೀಡಾಗಿದ್ದು, ಪತ್ನಿ ಮಹಾ ಲಕ್ಷಿ ಹಾಗೂ ಶಂಕರ ನಾರಾಯಣ ಹೆಬ್ಟಾರ್ ಪಾರಾಗಿದ್ದರು.
ಈ ಕೃತ್ಯಕ್ಕೆ ಶಂಕರನಾರಾಯಣನ ಪ್ರೇಮ ಪ್ರಕರಣವೇ ಕಾರಣ ಎಂಬುದು ಡೆತ್‌ನೋಟ್‌ನಿಂದ ಬಹಿರಂಗಗೊಂಡಿತ್ತು. ಆತ ಘಟನೆಗೆ ಆರು ತಿಂಗಳ ಹಿಂದೆ ಪತ್ನಿ, ಮಕ್ಕಳನ್ನು ತೊರೆದು ಪ್ರಿಯತಮೆಯ ಜತೆಗೆ ವಾಸಿಸುತ್ತಿದ್ದ. ಘಟನೆ ನಡೆಯುವ ಎರಡು ದಿನಗಳ ಹಿಂದೆ ಆಕೆಗೆ ನಿಶ್ಚಿತಾರ್ಥವಾಗಿದ್ದು, ಇದರಿಂದ ನೊಂದು ಮನೆಗೆ ಬಂದಿದ್ದ. “ನಾನು, ನನ್ನ ಹೆಂಡತಿ ಹಾಗೂ ಮಕ್ಕಳು ವಿಷ ಕುಡಿದು ಸಾಯಲು ತೀರ್ಮಾನಿಸಿದ್ದೇವೆ. ನನ್ನ ಸಾವಿಗೆ ಪ್ರಿಯತಮೆಯೇ ಕಾರಣ. ಆಕೆ ಬಂದು ನೋಡುವವರೆಗೆ ನಮ್ಮ ಶವಗಳನ್ನು ತೆಗೆಯಬಾರದು’ ಎಂದು 18 ಪುಟಗಳ ಡೆತ್‌ನೋಟ್ ಬರೆದಿದ್ದ. ಇದನ್ನು ಬಲವಾದ ಸಾಕ್ಷಿಯಾಗಿ ಪರಿಗಣಿಸಲಾಗಿತ್ತು. ಪ್ರಾಸಿಕ್ಯೂಶನ್ ಪರ ಜಿಲ್ಲಾ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್‌ಚಂದ್ರ ಶೆಟ್ಟಿ ವಾದಿಸಿದ್ದರು.
ಮಕ್ಕಳ ಕೊಲೆಗೆ ಸೆಕ್ಷನ್ 302ರಡಿ ಗಲ್ಲು, ಪತ್ನಿಯ ಕೊಲೆ ಯತ್ನಕ್ಕೆ ಸೆಕ್ಷನ್ 307ರಡಿ 7 ವರ್ಷ ಕಠಿನ ಸಜೆ ಹಾಗೂ 10 ಸಾ. ರೂ. ದಂಡ, ವಿಷವುಣಿಸಿದ್ದಕ್ಕೆ ಸೆಕ್ಷನ್ 328ರಡಿ 10 ವರ್ಷ ಕಠಿನ ಸಜೆ ಹಾಗೂ 10 ಸಾ.ರೂ. ದಂಡ, ವಿಷದ ಬಾಟಲಿ ಎಸೆದು ಸಾಕ್ಷ ನಾಶ ಯತ್ನಕ್ಕೆ ಸೆಕ್ಷನ್ 201ರಡಿ 7 ವರ್ಷ ಕಠಿನ ಸಜೆ ಹಾಗೂ 10 ಸಾ.ರೂ. ದಂಡ, ಆತ ಆತ್ಮಹತ್ಯೆಗೆ ಯತ್ನಿಸಿದ್ದಕ್ಕೆ 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ಸಾವಿಗೀಡಾದ ಮಕ್ಕಳ ತಾಯಿಯು ಕಾನೂನು ಸೇವಾ ಪ್ರಾಧಿಕಾರದಲ್ಲಿ ಪರಿಹಾರ ಪಡೆದುಕೊಳ್ಳಬಹುದು ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಇತಿಹಾಸಲ್ಲಿ ಇದು 3ನೇ ಮರಣದಂಡನೆ ಶಿಕ್ಷೆಯಾಗಿದ್ದು, ಅವೆಲ್ಲವನ್ನೂ ಕುಂದಾಪುರದ ನ್ಯಾಯಾಲಯವೇ ವಿಧಿಸಿರುವುದು ವಿಶೇಷ. 2016ರಲ್ಲಿ ಯುವತಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಸತೀಶ್ ಹೆಮ್ಮಾಡಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದ್ದು, ಬಳಿಕ 2017ರಲ್ಲಿ ಹೈಕೋರ್ಟ್ ಅದನ್ನು ರದ್ದುಪಡಿಸಿತ್ತು. ಗರ್ಭಿಣಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.
2010ರ ಜೂ. 16ರಂದು ಪುತ್ತೂರಿನ ನಿವಾಸಿ, ಪಂಜಾಬ್ ನ್ಯಾಶನಲ್ ಬ್ಯಾಂಕಿನ ಮಹಾರಾಷ್ಟ್ರದ ಸೋಲಾಪುರ ಶಾಖೆಯ ಸಹಾಯಕ ಮ್ಯಾನೇಜರ್ ರಮೇಶ್ ನಾಯ್ಕ ತನ್ನ ಇಬ್ಬರು ಮಕ್ಕಳು, ಅತ್ತೆ ಹಾಗೂ ನಾದಿನಿಯನ್ನು ಕೊಲೆ ಮಾಡಿದ ಪ್ರಕರಣ ಹಾಗೂ ಸುಪ್ರೀಂ ಕೋರ್ಟೊಂದರ ಪ್ರಕರಣವನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ವಿಚಾರಣೆ ವೇಳೆ ಉಲ್ಲೇಖೀಸಿದ್ದರು. ಅವುಗಳಿಗೂ ಈ ಪ್ರಕರಣಕ್ಕೂ ಸಾಮ್ಯತೆ ಇದ್ದು, ಅಲ್ಲಿ ನೀಡಿದ್ದ ಮರಣದಂಡನೆಯನ್ನೇ ಇಲ್ಲೂ ನೀಡಬೇಕು ಎಂದು ಮನವಿ ಮಾಡಿದ್ದರು.
ಈ ಪ್ರಕರಣದಲ್ಲಿ ಒಟ್ಟು 43 ಸಾಕ್ಷಿಗಳ ಪೈಕಿ 17ನ್ನು ವಿಚಾರಣೆ ನಡೆಸಲಾಗಿತ್ತು. ಮಕ್ಕಳ ತಾಯಿ ಹಾಗೂ ಅಪರಾಧಿಯ ಪತ್ನಿಯೇ ಪ್ರಕರಣದ ಪ್ರತ್ಯಕ್ಷ ಸಾಕ್ಷಿಯಾಗಿದ್ದರು. ಅಪರಾಧಿಯು ಈ ಕೃತ್ಯ ಎಸಗುವ ಮುನ್ನ ಪತ್ರಕರ್ತರೊಬ್ಬರಿಗೆ ಕರೆ ಮಾಡಿ, “ಮರುದಿನ ಮನೆಗೆ ಬನ್ನಿ, ಹಾಟ್ ನ್ಯೂಸ್ ಇದೆ’ ಎಂದು ಹೇಳಿದರು. ಹಾಗಾಗಿ ಆ ಪತ್ರಕರ್ತ ಕೂಡ ಸಾಕ್ಷಿಧಾರರಾಗಿದ್ದರು. ಅಂದಿನ ಬೈಂದೂರು ವೃತ್ತ ನಿರೀಕ್ಷಕ ರಾಘವ ಪಡೀಲ್ ಚಾರ್ಜ್‌ಶೀಟ್ ಸಲ್ಲಿಸಿದ್ದರು.