ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶಾಂತ ವಾತಾವರಣದ ಪ್ರಾಕೃತಿಕ ಸೌಂದರ್ಯದ ಸುಂದರ ವಲಯ, ಆರ್ಥಿಕವಾಗಿ ಹಿಂದುಳಿದಿದ್ದರೂ, ಪ್ರೇಕ್ಷಣೀಯ ಪ್ರವಾಸಿತಾಣವಾಗಿ, ಧಾರ್ಮಿಕ ಕ್ಷೇತ್ರವಾಗಿ, ಜನಪದೀಯ ಹಾಗೂ ಸಾಂಸ್ಕೃತಿಕವಾಗಿ ಮುಂದಿದ್ದು ಜಿಲ್ಲೆಯ ಶಿರೂಭಾಗದ ಬೈಂದೂರು ತಾಲೂಕು ಗುರುತಿಸಿಕೊಂಡಿದೆ ಎಂದು ವಿಧಾನಪರಿಷತ್ ವಿರೋಧಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬೈಂದೂರು ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೆಷನ್ ನೇತೃತ್ವದಲ್ಲಿ ಜಿಲ್ಲೆ ಹಾಗೂ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೆಷನ್ ಸಹಕಾರದಲ್ಲಿ ಬೆಸುಗೆ ಫೌಂಡೇಶನ್ ಬಂದೂರು, ಗ್ರಾಪಂ ಪಡುವರಿ, ಜಿಲ್ಲಾಡಳಿತ ಉಡುಪಿ ಮತ್ತು ಪ್ರವಾಸೋದ್ಯಮ ಇಲಾಖೆ ಇವರ ಸಹಯೋಗದಲ್ಲಿ ಸೋಮೇಶ್ವರ ಕಡಲತಡಿಯಲ್ಲಿ ನಡೆದ ೬ನೇ ಕರ್ನಾಟಕ ರಾಜ್ಯ ಜ್ಯೂನಿಯರ್ ಬಾಲಕ, ಬಾಲಕಿಯರ ಕಬಡ್ಡಿ ಚಾಂಪಿಯನ್‌ಶಿಪ್-೨೦೧೯ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮೀಣ ಭಾಗದ ಕ್ರೀಡೆಯಾದ ಕಬಡ್ಡಿ ಇಂದು ಜಾಗತಿಕ ಮುನ್ನಣೆಗಳಿಸಿದೆ. ಯಶಸ್ಸು ಸುಲಭದಲ್ಲಿ ದಕ್ಕುವುದಿಲ್ಲ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದರೆ ಪೂರ್ವಭಾವಿ ತಯಾರಿ, ಕಠಿಣ ಪರಿಶ್ರಮ, ಧನತ್ಮಕ ಗುರಿ ಹಾಗೂ ಸಮರ್ಪಣಾ ಮನೋಭಾವ ಮತ್ತು ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸುವ ಗುಣಗಳು ಅತೀ ಅಗತ್ಯ ಎಂದರು.
ಈ ಸಂದರ್ಭ ಪ್ರೋಕಬಡ್ಡಿಯ ಕರ್ನಾಟಕದ ಕ್ರೀಡಾಪಟುಗಳಾದ ಪ್ರಶಾಂತ್ ರೈ, ಹರೀಶ್ ನಾಯ್ಕ್, ಸುಕೇಶ್ ಹೆಗ್ಡೆ, ಕೆ. ಪ್ರಪಂಚನ್, ಸಚಿನ್ ವಿಟ್ಲ ಹಾಗೂ ಬೆಂಗಳೂರು ಬುಲ್ಸ್ ತಂಡದ ಕೋಚ್ ಅರ್ಜುನ ಪ್ರಶಸ್ತಿ ಪುರಸ್ಕೃತ ಬಿ. ಸಿ. ರಮೇಶ, ಪ್ರೋ ಕಬಡ್ಡಿ ತೀರ್ಪುಗಾರರಾದ ಶಿವಣ್ಣ, ಹನುಮಂತಯ್ಯ ಗೌಡ ಇವರನ್ನು ಶಾಸಕರು ಸನ್ಮಾನಿಸಿದರು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ಉಪ ನಿರ್ದೇಶಕಿ ಅನಿತಾ ಭಾಸ್ಕರ್, ಜಿಪಂ ಸದಸ್ಯ ಸುರೇಶ ಬಟ್ವಾಡಿ, ತಾಪಂ ಸದಸ್ಯರಾದ ಮಹೇಂದ್ರ ಪೂಜಾರಿ, ಪುಷ್ಪರಾಜ್ ಶೆಟ್ಟಿ, ಪಡುವರಿ ಗ್ರಾ.ಪಂ ಅಧ್ಯಕ್ಷೆ ದೀಪಾ ಶೆಟ್ಟಿ, ಉಪಾಧ್ಯಕ್ಷ ಸದಾಶಿವ ಡಿ., ಉದ್ಯಮಿ ಜಿ. ಗೋಕುಲ್ ಶೆಟ್ಟಿ, ಗೋಪಾಲಕೃಷ್ಣ ಕಲ್ಮಕ್ಕಿ, ದೀಪಕ್‌ಕುಮಾರ್ ಶೆಟ್ಟಿ, ರಾಜೇಂದ್ರ ಸುವರ್ಣ, ಶ್ರೀಧರ ಬಿಜೂರು ಉಪಸ್ಥಿತರಿದ್ದರು.
ಬೆಸುಗೆ ಫೌಂಡೇಶನ್ ಅಧ್ಯಕ್ಷ ಕುಂಜಾಲು ವೆಂಕಟೇಶ ಕಿಣಿ ಪ್ರಾಸ್ತಾವಿಸಿದರು. ಕಾರ್ಯಾಧ್ಯಕ್ಷ ಜಯಾನಂದ ಹೋಬಳಿದಾರ್ ಸ್ವಾಗತಿಸಿದರು. ರಾಘವೇಂದ್ರ ದಡ್ಡು, ಗಣಪತಿ ಹೋಬಳಿದಾರ್ ನಿರ್ವಹಿಸಿದರು. ಸತ್ಯನಾರಾಯಣ ಬಾಡ ವಂದಿಸಿದರು.