ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕ್ರೀಡೆಗಳ ಮೂಲಕ ಯುವ ಸಮುದಾಯವನ್ನು ಸಂಘಟಿಸಲು ಸಾಧ್ಯವಾಗುತ್ತದೆ. ಕ್ರೀಡಾಳುಗಳಿಗೆ ಅವಶ್ಯಕತೆಯಾಗಿರುವಂತ ಕ್ರೀಡಾಂಗಣದ ಪ್ರಗತಿ ಅತ್ಯವಶ್ಯಕವಾಗಿದ್ದು, ಮುಂದಿನ ದಿನದಲ್ಲಿ ಬೈಂದೂರು ಗಾಂಧಿ ಮೈದಾನದ ಪ್ರಗತಿ ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಆದ್ಯತೆ ನೀಡುತ್ತೇನೆ ಎಂದು ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
ಬಂದೂರು ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಮೂರು ದಿನಗಳ ಕಾಲ ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆಯುವ ರಾಜ್ಯಮಟ್ಟದ ಹೊನಲು ಬೆಳಕಿನ ೪೦ ಗಜಗಳ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿ, ಕ್ರೀಡಾ ರಂಗದಲ್ಲಿ ಸಾಧನೆಗೈದವರನ್ನು ಸಮ್ಮಾನಿಸಿ ಮಾತನಾಡಿದರು. ದೇಶ ಮತ್ತು ಸಮಾಜವನ್ನು ಕಟ್ಟಬೇಕಾದರೆ ಸಂಘ ಸಂಸ್ಥೆಗಳ ಪಾತ್ರ ಪ್ರಮುಖವಾಗಿರುತ್ತದೆ. ರಾಜ್ಯದ ವಿವಿಧ ಭಾಗಗಳಿಂದ ಕ್ರೀಡಾಪಟುಗಳನ್ನು ಆಮಂತ್ರಿಸಿ ಸಂಘರ್ಷಕ್ಕೆ ಅವಕಾಶ ಕೊಡದೇ ಸೌಹಾರ್ದತೆಯಿಂದ ಪಂದ್ಯದ ಮೂಲಕ ತಂಡಗಳನ್ನು ಮುಖಾಮುಖಿಯಾಗಿಸಿ ಬಾಂಧವ್ಯ ಬೆಸೆಯುವ ಮೂಲಕ ಒಗ್ಗಟ್ಟನ್ನು ಸಾರುವ ಬೈಂದೂರು ಸ್ಪೋಟ್ಸ್ ಕ್ಲಬ್‌ನ ಪ್ರಯತ್ನ ಶ್ಲಾಘನೀಯ ಎಂದ ಅವರು ಕ್ರೀಡಾ ಸ್ಪೂರ್ತಿ, ಬದ್ದತೆ ಹಾಗೂ ಆತ್ಮವಿಶ್ವಾಸವಿದ್ದರೆ ಯಾವ ಸಾಧನೆಗೂ ಅಡ್ಡಿಯಾಗಲಾರದು ಎಂದು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.
ಬೆಂಗಳೂರು ಜೋತಿಷಿ ಡಾ. ಮಹೇಂದ್ರ ಭಟ್, ಬಂದೂರು ಬೆಸುಗೆ ಫೌಂಡೇಶನ್ ಅಧ್ಯಕ್ಷ ಕುಂಜಾಲು ವೆಂಕಟೇಶ ಕಿಣಿ, ಉದ್ಯಮಿ ರಿಯಾಜ್ ಅಹ್ಮದ್ ಬಂದೂರು, ಹಿರಿಯರಾದ ಬಿ. ಮಾಧವ ರಾವ್, ಯಡ್ತರೆ ಗ್ರಾಪಂ ಸದಸ್ಯರಾದ ಎನ್. ನಾಗರಾಜ ಶೆಟ್ಟಿ, ನಾಗರಾಜ ಗಾಣಿಗ ಬಂಕೇಶ್ವರ, ಲವಣ್ಯ ವ್ಯವಸ್ಥಾಪಕ ಬಿ. ಗಣೇಶ ಕಾರಂತ್, ಬಿಜೆಪಿ ಮಂಡಲದ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಕಾರ್ಯದರ್ಶಿ ಎನ್. ದೀಪಕ್ ಕುಮಾರ್ ಶೆಟ್ಟಿ, ಕ್ಲಬ್ ಅಧ್ಯಕ್ಷ ಕಿರಣ್ ಬೈಂದೂರು, ವಿಕ್ರಂ ಕ್ರಿಕೇಟ್ ಕ್ಲಬ್ ಸದಸ್ಯರಾದ ನಾರಾಯಣ ಕೆರೆಕಟ್ಟೆ, ಸುನಿಲ್ ಬೈಂದೂರು, ದಿನೇಶ್ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು. ವೀಕ್ಷಕ ವಿವರಣೆಗಾರ ಶಿವನಾರಾಯಣ ಕೋಟ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕ್ಲಬ್ಬಿನ ಕಾರ್ಯದರ್ಶಿ ಚರಣ್ ಬಂದೂರು ವಂದಿಸಿದರು.