ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗಂಗೊಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ವೈ.ಶ್ರೀನಿವಾಸ ಖಾರ್ವಿ ಮತ್ತು ಪ್ರೇಮಾ ಸಿ.ಎಸ್.ಪೂಜಾರಿ ಅವಿರೋಧ ಆಯ್ಕೆಯಾಗಿದ್ದಾರೆ.
ಕುಂದಾಪುರ ತಹಶೀಲ್ದಾರ್ ತಿಪ್ಪೇಸ್ವಾಮಿ ಪಂಚಾಯಿತಿ ಸಭಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಿ, ಫಲಿತಾಂಶ ಘೋಷಣೆ ಮಾಡಿದರು. ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಬಹುಮತ ಪಡೆದಿದ್ದ ಬಿಜೆಪಿ ಬೆಂಬಲಿತರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆಯಿತು.
ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ತಾಲ್ಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಾರಾಯಣ ಕೆ, ಸದಸ್ಯ ಸುರೇಂದ್ರ ಖಾರ್ವಿ, ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ತ್ರಾಸಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶೇಖರ ದೇವಾಡಿಗ, ಗಂಗೊಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಜಯರಾಮ ದೇವಾಡಿಗ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದರು. ಚುನಾವಣಾ ಶಾಖೆಯ ರವಿ, ಆಡಳಿತಾಧಿಕಾರಿ ಚಂದ್ರಶೇಖರ, ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ, ಕಾರ್ಯದರ್ಶಿ ಬಿ.ಮಾಧವ, ಗ್ರಾಮಕರಣಿಕ ರಾಘವೇಂದ್ರ ದೇವಾಡಿಗ ಇದ್ದರು.
ಗ್ರಾಮ ಪಂಚಾಯಿತಿ ಸದಸ್ಯ ರಾಘವೇಂದ್ರ ಪೈ ಸ್ವಾಗತಿಸಿ, ನಿರೂಪಿಸಿದರು. ಬಿ.ಲಕ್ಷ್ಮೀಕಾಂತ ಮಡಿವಾಳ ವಂದಿಸಿದರು.
ನೂತನವಾಗಿ ಆಯ್ಕೆಯಾದ ವೈ.ಶ್ರೀನಿವಾಸ ಖಾರ್ವಿ ಮತ್ತು ಪ್ರೇಮಾ ಸಿ.ಎಸ್. ಪೂಜಾರಿ ಅವರನ್ನು ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಶೋಭಾ ಜಿ.ಪುತ್ರನ್ ಶುಭ ಹಾರೈಸಿದ್ದಾರೆ.