ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯತ್‌ನ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀನಿವಾಸ ಖಾರ್ವಿ ಮತ್ತು ಪ್ರೇಮಾ ಸಿ.ಎಸ್.ಪೂಜಾರಿ ಅವರನ್ನು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ತಮ್ಮ ಸ್ವಗೃಹದಲ್ಲಿ ಶನಿವಾರ ಅಭಿನಂದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸುಕುಮಾರ ಶೆಟ್ಟಿ, ಗಂಗೊಳ್ಳಿ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಗಂಗೊಳ್ಳಿ-ಕುಂದಾಪುರ ಸೇತುವೆ, ರಿಂಗ್ ರೋಡ್, ಮೀನುಗಾರಿಕಾ ಬಂದರಿನ ಅಭಿವೃದ್ಧಿ ಸಹಿತಿ ಸಾಧ್ಯವಾಗುವ ಎಲ್ಲಾ ಕಾರ್ಯಗಳನ್ನು ಮಾಡುವ ಪ್ರಯತ್ನ ನಡೆಸುತ್ತೇನೆ. ಗಂಗೊಳ್ಳಿ ಗ್ರಾಮ ಪಂಚಾಯತ್‌ನ್ನು ಮೇಲ್ದರ್ಜೆಗೇರಿಸಿ ಪಟ್ಟಣ ಪಂಚಾಯತ್ ಅಥವಾ ಪುರಸಭೆ ಮಾಡಲು ಸರಕಾರದ ಮೇಲೆ ಒತ್ತಡ ಹೇರಲಾಗುವುದು. ಗಂಗೊಳ್ಳಿ ಗ್ರಾಮ ಪಂಚಾಯತ್‌ನ್ನು ಮಾದರಿ ಪಂಚಾಯತ್ ಆಗಿ ಬೆಳೆಸುವ ಪ್ರಯತ್ನ ಗ್ರಾಪಂ ಸದಸ್ಯರ ಮೂಲಕ ನಡೆಯಬೇಕು. ಎಲ್ಲಾ ಸದಸ್ಯರ ಸಹಕಾರ ಬೆಂಬಲ ಪಡೆದು ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಬೇಕು ಎಂದು ಅವರು ಹೇಳಿದರು.
ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಪ್ರಧಾನ ಕಾರ್ಯದರ್ಶಿಗಳಾದ ದೀಪಕಕುಮಾರ್ ಶೆಟ್ಟಿ, ಬಾಲಚಂದ್ರ ಭಟ್, ಗ್ರಾಮ ಪಂಚಾಯತ್ ಸದಸ್ಯರಾದ ರಾಘವೇಂದ್ರ ಪೈ, ಶಾಂತಿ ಖಾರ್ವಿ, ಪಕ್ಷದ ಮುಖಂಡ ಅಶೋಕ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.