ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು : ತಾವು ಗವರ್ನರ್ ಆಗಿರುವ ಲಯನ್ಸ್ ಜಿಲ್ಲೆ ೩೧೭ಕ್ಕೆ ಸೇರಿದ ಉಡುಪಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಅತ್ಯಧಿಕ ನೂತನ ಕ್ಲಬ್ ಸ್ಥಾಪನೆಯ ಜತೆಗೆ ದಾಖಲೆ ಗಾತ್ರದ ಸಾಮಾಜಿಕ ಸೇವಾ ಕಾರ್ಯ ನಡೆಸಲಾಗಿದೆ ಎಂದು ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಬೈಂದೂರು-ಉಪ್ಪುಂದ ಲಯನ್ಸ್ ಕ್ಲಬ್‌ಗೆ ನೀಡಿದ ಅಧಿಕೃತ ಬೇಟಿ ಸಂದರ್ಭ ನಾಗೂರಿನ ಕುಸುಮಾ ಸಂಕೀರ್ಣದಲ್ಲಿ ಶನಿವಾರ ನಡೆಸಿದ ಸುದ್ದಿ ಗೋಷ್ಠಿಯಲ್ಲಿ ಮತನಾಡಿದರು. ಬ್ರಹ್ಮಗಿರಿ, ಬ್ರಹ್ಮಾವರ ಟೌನ್, ಉಡುಪಿ ನ್ಯೂಸಿಟಿ, ತಲ್ಲೂರು, ಶಂಕರನಾರಾಯಣದಲ್ಲಿ ನೂತನ ಲಯನ್ಸ್ ಕ್ಲಬ್, ಮಲ್ಪೆ, ಬ್ರಹ್ಮಗಿರಿ, ಕುಂದಾಪುರ ಸಿಟಿ ಸೆಂಟರ್, ಉಡುಪಿ ಸೌತ್ ಲಿಯೋ ಕ್ಲಬ್ ತೆರೆದುದಲ್ಲದೆ, ಇನ್ನೂ ೧೨ ಲಯನ್ಸ್ ಕ್ಲಬ್ ಸ್ಥಾಪನೆ ವಿವಿಧ ಹಂತದಲ್ಲಿದೆ. ಹದಿಹರೆಯದ ಮಕ್ಕಳಿಗೆ ಅಗತ್ಯವಾದ ಮಾಹಿತಿ ವರ್ಗಾಯಿಸುವ ನಿಟ್ಟಿನಲ್ಲಿ ೭೦ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ೨೦ ಶಾಲೆಗಳಲ್ಲಿ ಪೀಸ್ ಪೋಸ್ಟರ್ ಸ್ಪರ್ಧೆ, ಚರ್ಚ್‌ನಲ್ಲಿ ಗೂಡುದೀಪ ಸ್ಪರ್ಧೆ, ದೀಪಾವಳಿಯಂದು ಮೂರು ಧರ್ಮಗಳ ಗುರುಗಳ ಉಪಸ್ಥಿತಿಯಲ್ಲಿ ಸರ್ವಧರ್ಮ ದೀಪಾವಳಿ ಆಚರಣೆ ನಡೆದಿದೆ. ಹಸಿವು ನಿವಾರಣೆ ಅಂಗವಾಗಿ ನಡೆಸಿದ ಅನ್ನದಾನದಲ್ಲಿ ೧೬ ಸಾವಿರ ಜನರು ಪ್ರಯೋಜನ ಪಡೆದಿರುವರು. ಪರಿಸರ ರಕ್ಷಣೆ ದೃಷ್ಟಿಯಿಂದ ಅರಣ್ಯ ಇಲಾಖೆಯಿಂದ ೧. ೧೬ ಲಕ್ಷ ಗಿಡಗಳನ್ನು ಪಡೆದು ೮೦ ಶಿಕ್ಷಣ ಸಂಸ್ಥೆಗಳ ೨೦,೦೦೦ ವಿದ್ಯಾರ್ಥಿಗಳ ಮೂಲಕ ನೆಡಲಾಗಿದೆ. ನೆರೆ ಪರಿಹಾರಕ್ಕೆಂದು ಅಂತರರಾಷ್ಟ್ರೀಯ ಲಯನ್ಸ್ ನಿಧಿಯಿಂದ ಬಂದ ೧೦ ಸಾವಿರ ಡಾಲರ್ (ರೂ. ೬.೮ ಲಕ್ಷ) ಮೊತ್ತದಿಂದ ಉಡುಪಿ ಜಿಲ್ಲೆಯ ೯ ಕಡೆಗಳ ೭೫೦ ಸಂತ್ರಸ್ಥ ಕುಟುಂಬಗಳಿಗೆ ಜೀವನಾವಶ್ಯಕ ಸಾಮಗ್ರಿಗಳನ್ನು ವಿತರಿಸಲಾಗಿದೆ. ಮಡಿಕೇರಿಯ ಪ್ರಾಕೃತಿಕ ವಿಕೋಪದ ಸಂದರ್ಭ ೩ ಲಾರಿ ಲೋಡ್ ಪರಿಹಾರ ಸಾಮಗ್ರಿ ರವಾನಿಸಿದ್ದಲ್ಲದೆ ಲಯನ್ಸ್ ಕಾರ್ಯಕರ್ತರ ತಂಡ ಒಂದು ವಾರ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದೆ. ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನಿರ್ಗತಿಕರಿಗೆ ಮನೆ ನಿರ್ಮಾಣ, ವಿದ್ಯಾರ್ಥಿಗಳ ನೇತ್ರ ತಪಾಸಣೆ, ಒಂದು ವರ್ಷ ಪ್ರತಿ ಭಾನುವಾರ ಮಧುಮೇಹ ಕಾಯಿಲೆ ಕುರಿತು ಅರಿವು, ಮುನ್ನೆಚ್ಚರಿಕೆ, ತಪಾಸಣಾ ಕಾರ್ಯಕ್ರಮ, ಯಕ್ಷಗಾನ ಪ್ರದರ್ಶನ, ಮಕ್ಕಳಿಗೆ ಕ್ರಿಸ್‌ಮಸ್ ಸ್ಟಾರ್ ಸ್ಪರ್ಧೆ ಆಯೋಜಿಸಲಾಗಿತ್ತು ಎಂದ ಅವರು ಇವೆಲ್ಲವನ್ನು ಪರಿಗಣಿಸಿ ದುಬಾಯಿಯಲ್ಲಿ ನಡೆದ ಅಂತರರಾಷ್ಟ್ರೀಯ ’ಇಸಾಮೆ’ ಸಮಾವೇಶದಲ್ಲಿ ತಮಗೆ ಉನ್ನತ ಗೌರವ ಪ್ರಶಸ್ತಿ ನೀಡಲಾಯಿತು ಎಂದರು.
ಬೈಂದೂರು-ಉಪ್ಪುಂದ ಲಯನ್ಸ್ ಕ್ಲಬ್ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಸ್ವಾಗತಿಸಿ, ವಂದಿಸಿದರು. . ಜಿಲ್ಲಾ ಸಂಪುಟ ಕಾರ್ಯದರ್ಶಿ ಎಸ್. ಟಿ. ಕರ್ಕೇರಾ, ವಲಯಾಧ್ಯಕ್ಷ ವೇಣುಗೋಪಾಲ ಶೆಟ್ಟಿ ಇದ್ದರು.