ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಂಬದಕೋಣೆಯ ಸಂವೇದನಾ ಪದವಿ ಕಾಲೇಜಿನಲ್ಲಿ ಮಾ ೨ರಂದು ನಡೆಯುವ ಬೈಂದೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಎಸ್. ಜನಾರ್ದನ ಮರವಂತೆ ಅವರನ್ನು ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಮಂಗಳವಾರ ಅವರ ಮನೆಗೆ ತೆರಳಿ ಸಮ್ಮೇಳನಕ್ಕೆ ಆಮಂತ್ರಿಸಿದರು. ಆ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಾಹಿತ್ಯವೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಹಿರಿಯರಾದ ಅವರನ್ನು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಅದರಿಂದ ಹೊಸ ತಾಲ್ಲೂಕಿನ ಪ್ರಥಮ ಸಮ್ಮೇಳನಕ್ಕೆ ವಿಶೇಷ ಅರ್ಥ ಬರುತ್ತದೆ. ಸಮ್ಮೇಳನದ ಸಿದ್ಧತೆಗಳು ನಡೆಯುತ್ತಿದ್ದು ತಾಲ್ಲೂಕಿನ ಪದಾಧಿಕಾರಿಗಳು, ಸ್ಥಳೀಯ ಸಂಘಟನೆಗಳು ಸೇರಿ ಅದನ್ನು ಯಶಸ್ವಿಯಾಗಿ ನಡೆಸಲು ಮುಂದಾಗಿದ್ದಾರೆ ಎಂದರು.
ತಾಲ್ಲೂಕು ಪರಿಷತ್ತಿನ ಅಧ್ಯಕ್ಷ ಎಚ್, ರವೀಂದ್ರ, ಜಿಲ್ಲಾ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಸುಬ್ರಹ್ಮಣ್ಯ ಭಟ್, ತಾಲ್ಲೂಕು ಗೌರವ ಕಾರ್ಯದರ್ಶಿಗಳಾದ ಪ್ರಕಾಶ ಹೆಬ್ಬಾರ್, ಗಣಪತಿ ಹೋಬಳಿದಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಪುಂಡಲೀಕ ನಾಯಕ್, ಕೃಷ್ಣಗೋಪಾಲ ಹೆಬ್ಬಾರ್, ವಿ. ಎಚ್ ನಾಯಕ್, ಯು. ರಮೇಶ ವೈದ್ಯ, ಸಾಧನಾ ಸದಸ್ಯರಾದ ಸುಬ್ರಹ್ಮಣ್ಯ ಅವಭೃತ್, ದೇವಿದಾಸ ಶ್ಯಾನುಭಾಗ್, ಜತೀಂದ್ರ, ಡಾ. ರೂಪಶ್ರೀ, ಕೇದಾರ್ ಇದ್ದರು.
ಇದಕ್ಕಿಂತ ಮೊದಲು ಕಂಬದಕೋಣೆ ಸಂವೇದನಾ ಕಾಲೇಜಿನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ನೀಲಾವರ ಸುರೇಂದ್ರ ಅಡಿಗ ಸಮ್ಮೇಳನದ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಿದ್ದರು.