ಕುಂದಾಪುರ: ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ- ಕುಂದಾಪುರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಉಡುಪಿ ಜಿಲ್ಲೆಯ ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆ ಹಾಗೂ ಭಾರತೀಯ ಕಿಸಾನ್ ಸಂಘಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಹಲಸಿನ ಹಬ್ಬ ಜೂನ್ 13 ಹಾಗೂ 14ರಂದು ಕುಂದಾಪುರದ ಶ್ರೀ ನಾರಾಯಣ ಗುರು ಕಲ್ಯಾಣಮಂಟಪದಲ್ಲಿ ಜರಗಲಿದೆ.
ಹಿಂದೆ ಹಲಸು ನಮ್ಮಲ್ಲಿ ಮುಖ್ಯ ಆಹಾರವಾಗಿತ್ತು, ಕಾರಣಾಂತರಗಳಿಂದ ಈಗ ನಿರ್ಲಕ್ಷ್ಯಕ್ಕೆ ಈಡಾಗಿದೆ. ಹಲಸನ್ನು ಮತ್ತೆ ಆಹಾರದ ಮುಖ್ಯ ವಾಹಿನಿಗೆ ತರುವುದಕ್ಕಾಗಿ ಈ ಹಲಸಿನ ಮೇಳವನ್ನು ಆಯೋಜಿಸಲಾಗಿದೆ.
ಬದಲಾದ ಕಾಲಘಟ್ಟದಲ್ಲಿ ಸಾಂಪ್ರದಾಯಿಕವಾದ ಎಲ್ಲ ತಿಂಡಿತೀರ್ಥಗಳಂತೆ ಹಲಸಿನ ಖಾದ್ಯಗಳು ಮರೆವೆಗೆ ಸಂದಿವೆ. ಅಷ್ಟು ಮಾತ್ರ ಅಲ್ಲ; ಹಲಸಿನ ಬಗೆಗೇ ಅವಜ್ಞೆ ಹುಟ್ಟಿಕೊಂಡಿದೆ. ಆದರೆ, ಹಲಸು ಹೀಗೆ ನಿರ್ಲಕ್ಷ್ಯಕ್ಕೆ ಒಳಗಾಗಬೇಕಾದ ವಸ್ತುವಲ್ಲ. ಹವಾಮಾನ ಬದಲಾವಣೆ, ಭೂಮಿ ಬಿಸಿಯೇರಿಕೆ, ಮಾಲಿನ್ಯ ಇತ್ಯಾದಿಗಳನ್ನು ನಾವು ಈಗಾಗಲೇ ಅನುಭವಿಸುತ್ತಿದ್ದೇವೆ. ಇದು ಹೀಗೆಯೇ ಮುಂದುವರಿದರೆ ಆಹಾರ ಕ್ಷಾಮ ಅನುಭವಿಸಬೇಕಾದ ದಿನವೂ ದೂರವಿಲ್ಲ. ಅಂತಹ ಸನ್ನಿವೇಶ ಎದುರಾದರೆ ಆಧಾರವಾಗಬಲ್ಲ ಹಲಸಿನಂತಹ ಹಣ್ಣಿನ ಬಗ್ಗೆ ಜನರಲ್ಲಿ ನಿಧಾನವಾಗಿಯಾದರೂ ಮತ್ತೆ ತಿಳಿವು ಮೂಡುಸುವುದಕ್ಕಾಗಿ ಮತ್ತೆ ಆಯೋಜಿಸಲಾಗಿದೆ.
ಕುಂದಾಪುರದಲ್ಲಿ ಈ ಬಗ್ಗೆ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕಿ ಡಾ| ಜಯಲಕ್ಷಿ ನಾರಾಯಣ ಹೆಗಡೆ ಹಾಗೂ ಮೊದಲಾದವರು ಉಪಸ್ಥಿತರಿದ್ದರು.