ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪ್ರತಿಭೆಯನ್ನು ಹೊರ ತೆಗೆಯುವುದೇ ವಿದ್ಯಾಭ್ಯಾಸ. ಅಕ್ಷರ ಜ್ಞಾನ ಓದುವುದಕ್ಕೋ ಬರೆಯುವುದಕ್ಕೋ ತಿಳುವಳಿಕೆಯೇ ಹೊರತು ಅದು ಜಗತ್ತಿನ ಅರಿವಲ್ಲ. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಜೀವ ಯೋಗ್ಯತೆಗಳಿರುತ್ತದೆ. ತನ್ನ ಅರಿವೇ ತನಗೆ ಗುರು ಎಂದು ಅರಿತಾಗ ಮಾತ್ರ ಪ್ರಪಂಚದಲ್ಲಿ ಭೃಷ್ಟಾಚಾರ, ಅತ್ಯಾಚಾರ, ಗಲಭೆ ಇರುವುದಿಲ್ಲ. ಅವಾಗಲೇ ವಿಶ್ವಶಾಂತಿ ಸಾಧ್ಯ ಎಂದು ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಹೇಳಿದರು.
ವತ್ತಿನೆಣೆ ಕ್ಷಿತಿಜ ನೇಸರಧಾಮದಲ್ಲಿ ಶನಿವಾರ ಬೈಂದೂರು ರೋಟರಿ ಕ್ಲಬ್ ವತಿಯಿಂದ ನಡೆದ ವಿಶ್ವ ಅರಿವು ಮತ್ತು ಶಾಂತಿ ದಿನಾಚರಣೆಯಲ್ಲಿ ಪ್ರಧಾನ ಭಾಷಣಕಾರರಾಗಿ ಉಪನ್ಯಾಸ ನೀಡಿದರು. ಇಂದಿನ ಕಾಲಘಟ್ಟದಲ್ಲಿ ಜಗತ್ತು ಅಂಗೈಯಲ್ಲಿದ್ದರೆ ಬೆರಳು ಅದರ ನಿಯಂತ್ರಣ ಮಾಡುತ್ತದೆ. ಕಳೆದ ೧೫೦ ವರ್ಷಕ್ಕೂ ಹೆಚ್ಚು ಅಮೇರಿಕಾದ ಚಿಕಾಗೋನಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ಸನ್ಯಾಸಿ ಸ್ವಾಮಿ ವಿವೇಕಾನಂದರ ಭಾಷಣದಿಂದ ಸಾಹೋದರ್ಯ ಹುಟ್ಟಿಕೊಂಡಿತು. ಹಾಗೆಯೇ ರೋಟರಿ ಕೂಡಾ ಚಿಕಾಗೋನಲ್ಲಿ ಹುಟ್ಟಿದ ಸಂಸ್ಥೆಯಾದರೂ ವಿಶ್ವ ಭಾತೃತ್ವವನ್ನು ಸಾರುತ್ತಿದೆ. ಇದು ಒಂದು ರೀತಿಯಲ್ಲಿ ಕೊಟ್ಟು ಪಡೆಯುವ ವಿಧಾನವಾಗಿದ್ದರೂ ಕೂಡಾ ವಿವೇಕಾನಂದರ ಪ್ರೇರಣೆಯಾಗಿದೆ ಅಂದರೂ ತಪ್ಪಾಗಲಾರದು. ರೋಟರಿ ಅಂತರಾಷ್ಟ್ರೀಯ ಸಂಸ್ಥೆಯಾದರೂ ಭಾರತದಲ್ಲಿ ಭಾರತೀಯ ಸದಸ್ಯರು ಅದರಲ್ಲಿ ಭಾರತೀಯತೆ ತಂದು ಎಲ್ಲಾ ವಿಭಾಗದಲ್ಲಿ ಸಮಾಜಮುಖಿ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಅರಿವೇ ಗುರು ಎಂಬ ನೆಲೆಯಲ್ಲಿ ರೋಟರಿ ಬಂಧುಗಳು ತಮ್ಮನ್ನು ತಾವು ಪರಸ್ಪರ ಅರಿಕೊಂಡಿದ್ದಾರೆ. ಇದರಿಂದ ಪ್ರತಿಯೊಬ್ಬ ಸದಸ್ಯನ ವ್ಯಕ್ತಿತ್ವ ನಿರ್ಮಾಣ ಕಾರ್ಯ ನಡೆಯುತ್ತಿದೆ. ಜಗತ್ತನ್ನು ನಿರ್ಮಾಣ ಮಾಡುವ ಮನುಷ್ಯ ತನ್ನ ತಿಳುವಳಿಕೆ ಹಾಗೂ ಜ್ಞಾನ ಶ್ರೀಮಂತಿಕೆಯಿಂದ ಎಷ್ಟು ಬೆಳೆದಿದ್ದಾನೆ ಅನ್ನುವುದಕ್ಕಿಂತ ಅದರ ವಿನಿಯೋಗ ಹೇಗೆ ಎಂಬುದು ಮುಖ್ಯವಾಗುವುದರ ಜತೆಗೆ ಅನುಷ್ಠಾನವೂ ಪ್ರಮುಖವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಬೈಂದೂರು ಕ್ಲಬ್ಬಿನ ಅಧ್ಯಕ್ಷ ಐ. ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಪುಲ್ವಾನದಲ್ಲಿ ಮಡಿದ ವೀರ ಯೋಧರಿಗೆ ಶ್ರದ್ಧಂಜಲಿ ಸಲ್ಲಿಸಲಾಯಿತು. ಸಹಾಯಕ ಗವರ್ನರ್ ಕೊಡ್ಲಾಡಿ ಸುಭಾಷ್ಚಂದ್ರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ವಲಯ ಸೇನಾನಿಗಳಾದ ಹುಂಚನಿ ಕೃಷ್ಣಪ್ಪ ಶೆಟ್ಟಿ, ನರಸಿಂಹ ಹೊಳ್ಳ, ಡಾ. ಜಗದೀಶ ಶೆಟ್ಟಿ, ವಲಯದ ಎಂಟು ಕ್ಲಬ್‌ಗಳ ಅಧ್ಯಕ್ಷರಾದ ಜಾನ್ಸನ್ ಅಲ್ಮೇಡಾ, ಪ್ರಭಾಕರ, ಅಬ್ಬುಶೇಖ್ ಸಾಹೇಬ್, ಸಂತೋಷ್ ಶೆಟ್ಟಿ, ರಮಾನಾಥ ನಾಯಕ್, ಡಾ. ಸಂದೀಪ್, ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ. ಉಪಸ್ಥಿತರಿದ್ದರು. ಕುಂದಾಪುರ ಕ್ಲಬ್‌ನ ಅಧ್ಯಕ್ಷ ಗೋಪಾಲ ಶೆಟ್ಟಿ ಸ್ವಾಗತಿಸಿ, ಆರ್. ಸೋಮನಾಥನ್ ನಿರೂಪಿಸಿದರು.