ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಶೆಫ್‌ಟಾಕ್ ಪುಡ್ & ಹಾಸ್ಪಿಟಾಲಿಟಿ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗೆ ಕ್ಷಿಪ್ರ ಬೆಳವಣಿಗೆಯ ಉದ್ಯಮ ವಿಭಾಗದಲ್ಲಿ ಬಿಜಿನೆಸ್ ಎಕ್ಸ್‌ಲೆಕ್ಸ್ ಅವಾರ್ಡ್ 2019 (ಉದ್ಯಮ ಶ್ರೇಷ್ಠತಾ ಪ್ರಶಸ್ತಿ) ದೊರೆತಿದೆ. ಈ ಪ್ರಶಸ್ತಿಯ ಮೂಲಕ ಆಹಾರ ಮತ್ತು ಅತಿಥಿ ಸತ್ಕಾರ ವಿಭಾಗದಲ್ಲಿ ಗುಣಮಟ್ಟ ಹಾಗೂ ವೇಗದ ಪ್ರಗತಿ ಸಾಧಿಸಿ ಛಾಪು ಮೂಡಿಸಿರುವ ಸಂಸ್ಥೆಯ ಕೀರ್ತಿ ಮುಕುಟಕ್ಕೆ ಗರಿ ಸೇರಿದಂತಾಗಿದೆ.
ಮುಂಬೈನ ಬಿಲ್ಲವ ಚೆಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ, ಎಚ್‌ಡಿಎಫ್‌ಸಿ ಬ್ಯಾಂಕ್ ಸಹಯೋಗದೊಂದಿಗೆ ಮಾ.9ರಂದು ಮುಂಬೈನಲ್ಲಿ ಆಯೋಜಿಸಿದ್ದ ಉದ್ಯಮ ಸಮಾವೇಶಲ್ಲಿ ’ಉದ್ಯಮ ಶ್ರೇಷ್ಠತಾ ಪ್ರಶಸ್ತಿ’ಯನ್ನು ಶೆಪ್‌ಟಾಕ್ ಪುಡ್ & ಹಾಸ್ಪಿಟಾಲಿಟಿ ಪ್ರೈ. ಲಿ. ಸಂಸ್ಥೆಯ ಆಡಳಿತ ನಿರ್ದೇಶಕ ಗೋವಿಂದ ಬಾಬು ಪೂಜಾರಿಗೆ ಪ್ರದಾನ ಮಾಡಲಾಯಿತು.
ಈ ಸಂದರ್ಭ ಆದಿತ್ಯ ಬಿರ್ಲಾ ಲೈಫ್ ಇನ್ಸುರೆನ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಅಶೋಕ್ ಸುವರ್ಣ, ಬಿಲ್ಲವ ಚೆಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ಅಧ್ಯಕ್ಷ ಎನ್.ಟಿ ಪೂಜಾರಿ, ಕಾರ್ಯದರ್ಶಿ ಆನಂದ ಪೂಜಾರಿ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಪ್ರಮುಖರು ಸೇರಿದಂತೆ ಇತರರು ಇದ್ದರು.
2016-17ನೇ ಸಾಲಿನಲ್ಲಿ ಆಲ್ ಇಂಡಿಯ ಅಚೀವರ್ಸ್ ಫೌಂಡೇಶನ್‌ನಿಂದ ಶೆಫ್‌ಟಾಕ್ ಹಾಗೂ ಆಡಳಿತ ನಿರ್ದೇಶಕ ಗೋವಿಂದ ಪೂಜಾರಿ ಅವರಿಗೆ ‘ನಾಯಕತ್ವ ಹಾಗೂ ಕ್ಷಿಪ್ರ ಬೆಳವಣಿಗೆಯ ಕಂಪೆನಿ’ ಪ್ರಶಸ್ತಿ ದೊರೆತಿತ್ತು.

ಗೋವಿಂದ ಬಾಬು ಪೂಜಾರಿ 2008ರಲ್ಲಿ ಮುಂಬೈಯಲ್ಲಿ ಶೆಫ್‌ಟಾಕ್ ಕೇಟರಿಂಗ್ ಸರ್ವಿಸಸ್ ಆರಂಭಿಸಿದರು. 2015ರಲ್ಲಿ ಅದನ್ನು ಶೆಫ್‌ಟಾಕ್ ಫುಡ್ ಅಂಡ್ ಹಾಸ್ಪಿಟಾಲಿಟಿ ಪೈವೆಟ್ ಲಿಮಿಟೆಡ್ ಆಗಿ ಪರಿವರ್ತಿಸಿದರು. ಈಗ ಪೂನಾ, ಹೈದರಾಬಾದ್ ಮತ್ತು ಬೆಂಗಳೂರು ನಗರಗಳಲ್ಲಿ ಇದೇ ಉದ್ಯಮಗಳು ವಿಸ್ತರಿಸಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರು ಹಾಗೂ ರಾಜ್ಯದ ಇತರ ನಗರಗಳಲ್ಲಿ ಕರ್ನಾಟಕ ಸರಕಾರದ ಹಸಿವು ಮುಕ್ತ ಯೋಜನೆ ಜಾರಿಗೊಳಿಸಿ ಇಂದಿರಾ ಕ್ಯಾಂಟಿನ್ ಆರಂಭಿಸಿದಾಗ ಶೆಫ್‌ಟಾಕ್ ಅದರ ನಿರ್ವಹಣೆ ಹೊಣೆ ಹೊತ್ತು ಸಾವಿರಾರು ಮಂದಿಗೆ ಆಹಾರ ಒದಗಿಸುತ್ತಿದೆ.
ನಾಯಕತ್ವದ ಕೌಶಲ್ಯ ಮತ್ತು ಶ್ರಮದ ದುಡಿಮೆ ಮೂಲಕ ಯಶಸ್ಸು, ಪ್ರಸಿದ್ಧಿ ಗಳಿಸಿರುವ ಇವರು ತಮ್ಮ ಉದ್ಯಮದ ಮೂಲಕ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಹುಟ್ಟೂರು ಉಪ್ಪುಂದದಲ್ಲಿ ಜನೋಪಕಾರಿ ಸಂಸ್ಥೆಯೊಂದು ಇರಬೇಕೆಂಬ ಆಶಯದಿಂದ 2015ರಲ್ಲಿ ಶ್ರೀ ವರಲಕ್ಷ್ಮೀ ಸೌಹಾರ್ದ ಸಹಕಾರಿಯನ್ನು ತೆರೆದು ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರರಾದರು. ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗದ ಜನರಿಗೆ ಆರೋಗ್ಯ ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ನೆರವಾಗುತ್ತಿದ್ದಾರೆ.















