ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇಶವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಸಮಿಶ್ರ ಸರಕಾರಗಳು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಹಾಗಾಗಿ ದೇಶದಲ್ಲಿ ಸುಭದ್ರವಾದ ಒಂದು ಪಕ್ಷದ ಸರಕಾರ ರಾಜ್ಯ ಹಾಗೂ ದೇಶದಲ್ಲಿ ಬರಬೇಕಿದೆ ಎಂದು ಸೊರಬ ಶಾಸಕ ಕುಮಾರ ಬಂಗಾರಪ್ಪ ಹೇಳಿದರು.
ಅವರು ಬೈಂದೂರು ಬಿಜೆಪಿ ಕಛೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಈ ಚುನಾವಣೆ ಮುಂದಿನ ಐದು ವರ್ಷಕ್ಕಷ್ಟೇ ಅಲ್ಲ. ಬದಲಿಗೆ ಮುಂದಿನ ತಲೆಮಾರಿಗೆ ಎಂದು ಭಾವಿಸಬೇಕಿದೆ. ಎರಡು ತಲೆಮಾರುಗಳ ಮಾಡಿಕೊಂಡಿರುವ ನಷ್ಟವನ್ನು ತುಂಬಿಕೊಡಬೇಕಿದ್ದರೆ ಮತ್ತೆ ಬಿಜೆಪಿ ಪಕ್ಷವನ್ನೇ ಬೆಂಬಲಿಸಬೇದೆ.
ಬಿಜೆಪಿಯನ್ನು ಹೊರಗಿಡಬೇಕು ಎಂಬ ಏಕೈಕ ದುರುದ್ದೇಶದಿಂದ ಸಂಮಿಶ್ರ ಸರಕಾರಗಳು ಜನರ ಹಿತಾಸಕ್ತಿಯನ್ನು ಮರೆತು ಕೆಲಸ ಮಾಡುತ್ತಿವೆ. ರಾಜ್ಯದಲ್ಲಿ ಮೂರು ಎಂಪಿ ಸ್ಥಾನಗಳನ್ನು ಪಡೆದುಕೊಂಡ ಪಕ್ಷ ಇಂದು ಕರಾವಳಿ ಭಾಗದಲ್ಲಿ ಸ್ವರ್ಧಿಸುತ್ತಿರುವುದು ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಮೂಲೆಗುಂಪು ಮಾಡಲು ಮಾತ್ರ. ಶಿವಮೊಗ್ಗ ಕ್ಷೇತ್ರದಲ್ಲಿ ಜಾತಿ ಮತ್ತು ಧರ್ಮದ ಆಧಾರದಲ್ಲಿ ಲೆಕ್ಕಾಚಾರ ಮಾಡಿಕೊಂಡು ಮೈತ್ರಿ ಪಕ್ಷಗಳು ಚುನಾವಣೆ ಎದುರಿಸುತ್ತಿವೆ. ಆದರೆ ಇದು ಭಾರತೀಯರು ಹಾಗೂ ಕನ್ನಡಿಗರು ಎಂಬ ಆಧಾರದಲ್ಲಿ ಚುನಾವಣೆ ನಡೆಯುತ್ತದೆ. ಜೆಡಿಎಸ್ ಕರಾವಳಿಯಲ್ಲಿ ಅಧಿಪತ್ಯ ಸಾಧಿಸಲು ಹೊರಟಿದೆ. ಮುಂದಿನ ದಿನಗಳಲ್ಲಿ ಎಲ್ಲಿದೆಯಪ್ಪ ಕಾಂಗ್ರೆಸ್ ಎಲ್ಲಿದೆಯಲ್ಲಾ ಗೋಪಾಲ ಪೂಜಾರರು ಎನ್ನುವ ಕಾಲ ದೂರವಿಲ್ಲ ಎಂದರು.
ಸೋತವರು ಅನುದಾನ ತಂದಿದ್ದರೇ ಸೋಲಿಸುತ್ತಲೇ ಇರುತ್ತೇವೆ:
ಯಡಿಯೂರಪ್ಪನವರು ಹಾಗೂ ರಾಘವೇಂದ್ರ ಸಂಸದರಾಗಿದ್ದ ಅವಧಿಯಲ್ಲಿ ಕ್ಷೇತ್ರಕ್ಕೆ ಗರಿಷ್ಠ ಅನುದಾನ ತಂದಿದ್ದಾರೆ. ಈ ಬಗ್ಗೆ ದಾಖಲೆಯೂ ಇದೆ. ಆದರೆ ಸೋತವರು ಅನುದಾನ ತಂದಿದ್ದೇವೆಂದು ಹೇಳಿಕೊಳ್ಳುತ್ತಿದ್ದಾರೆ. ಸೋತ ಅಭ್ಯರ್ಥಿಗಳು ಇಷ್ಟೊಂದು ಅನುದಾನ ತರುವುದಾದರೇ ನಾವು ಅವರನ್ನೂ ಸೋಲಿಸುತ್ತಲೇ ಇರುತ್ತೇವೆ ಎಂದರು.
ಮಧು ಕಾಣೆಯಾಗಿದ್ದರು:
ಜೆಡಿಎಸ್ ಅಭ್ಯರ್ಥಿ ಚುನಾವಣೆ ಮುಗಿದ ನಂತರ ಕಾಣೆಯಾಗುತ್ತಾರೆ. ಫಾರಿನ್ ಪ್ಯಾಕೆಜ್ ಟೂರ್‌ನಲ್ಲಿ ಇರುವವರು ಉಪಚುನಾವಣೆ ಸಂದರ್ಭ ಪ್ರತ್ಯಕ್ಷರಾಗಿದ್ದರು, ಈಗ ನಾಮಪತ್ರ ಸಲ್ಲಿಸುವ ವೇಳೆ ಮರಳಿ ಬಂದಿದ್ದಾರೆ. ಸ್ವಂತ ಕ್ಷೇತ್ರದ ಜನರನ್ನೂ ಮಾತನಾಡಿಸಲು ಅವರು ಹೋಗಿಲ್ಲ ಎಂದು ಸಹೋದರನನ್ನು ಲೇವಡಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬೈಂದೂರು ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಕಾರ್ಯದರ್ಶಿ ದೀಪಕಕುಮಾರ್ ಶೆಟ್ಟಿ, ಯುವಮೋರ್ಚಾ ಅಧ್ಯಕ್ಷ ಶರತ್ ಶೆಟ್ಟಿ ಉಪ್ಪುಂದ, ಮಹಿಳಾ ಮೋರ್ಚಾ ಅಧ್ಯಕ್ಷ ಪ್ರೀಯಾ ಕಮಲೇಶ್, ಮುಖಂಡರಾದ ಸುರೇಶ್ ಬಟವಾಡಿ, ಬಾಲಚಂದ್ರ ಭಟ್, ಪುಪ್ಪರಾಜ್ ಶೆಟ್ಟಿ ಮೊದಲಾದವರು ಇದ್ದರು.