ಬೈಂದೂರು ವಿಧಾನಸಭಾ ಕ್ಷೇತ್ರದಲ್ಲೂ ಗೆಲುವಿನ ಅಂತರ ಹೆಚ್ಚಿಸಿಕೊಳ್ಳಲು ಸರ್ಕಸ್
ಬೈಂದೂರು: ರಾಜ್ಯದಲ್ಲಿ 23ರಂದು ನಡೆಯುವ ಎರಡನೇ ಹಂತದ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಖಾಡ ಸಿದ್ಧಗೊಂಡಿದ್ದು, ಕಣದಲ್ಲಿರುವ ಅಭ್ಯರ್ಥಿಗಳ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಕ್ಕೆ ಸೇರಿರುವ ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಅಧಿಕ ಮತಗಳನ್ನು ಗಳಿಸಿ ಮೇಲುಗೈ ಸಾಧಿಸಲು ಹಾಲಿ ಸಂಸದ ಬಿಜೆಪಿಯ ಬಿ. ವೈ. ರಾಘವೇಂದ್ರ ಮತ್ತು ಅವರ ಪ್ರತಿಸ್ಪರ್ಧಿ ಮೈತ್ರಿಕೂಟದ ಭಾಗವಾದ ಜೆಡಿಎಸ್ನ ಮಧು ಬಂಗಾರಪ್ಪ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.
ಬಿ.ಎಸ್.ಯಡಿಯೂರಪ್ಪ ರಾಜ್ಯ ವಿಧಾನಸಭೆಗೆ ಆಯ್ಕೆಯಾದ ಕಾರಣ ತೆರವಾದ ಸ್ಥಾನಕ್ಕೆ ಕಳೆದ ವರ್ಷ ನವೆಂಬರ್ 3ರಂದು ಉಪ ಚುನಾವಣೆ ನಡೆದಿತ್ತು. ಅದರಲ್ಲಿ ಅವರ ಪುತ್ರ ಬಿ.ವೈ.ರಾಘವೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಅವರೇ ಎದುರಾಳಿಗಳಾಗಿದ್ದು, ರಾಘವೇಂದ್ರ ವಿಜಯಿಯಾಗಿದ್ದರು. ಇದೀಗ ಐದು ತಿಂಗಳು, ಇಪ್ಪತ್ತು ದಿನಗಳ ಬಳಿಕ ಇದೇ 23ರಂದು ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಉಪ ಚುನಾವಣೆಯಲ್ಲಿ ಸ್ಪರ್ಧೆಗೆ ಸಂಬಂಧಿಸಿ ಅದೇ ವಿನ್ಯಾಸ ಈ ಬಾರಿಯೂ ಮುಂದುವರಿದಿದೆ.
ಪ್ರಜಾಕೀಯ ಮತ್ತು ಬಹುಜನ ಸಮಾಜ ಪಕ್ಷದ ಅಭ್ಯರ್ಥಿಗಳ ಜತೆಗೆ ಇನ್ನೂ 8 ಸ್ಪರ್ಧಿಗಳು ಸೇರಿದಂತೆ ಒಟ್ಟು 12 ಜನರು ಕಣದಲ್ಲಿದ್ದರೂ ನೈಜ ಸ್ಪರ್ಧೆ ಇರುವುದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಅದೇ ಅಭ್ಯರ್ಥಿಗಳ ನಡುವೆ. ಪ್ರಜಾಕೀಯ ಪಕ್ಷದ ಅಭ್ಯರ್ಥಿ ವೆಂಕಟೇಶ ಆರ್. ಮತ್ತು ಬಹುಜನ ಸಮಾಜ ಪಕ್ಷದ ಗುಡ್ಡಪ್ಪ ಬೈಂದೂರಿನಲ್ಲಿ ಮಾಧ್ಯಮಗಳಲ್ಲಿ ಪ್ರಚಾರ ನಡೆಸಿ ಹೋಗಿದ್ದಾರೆ. ಉಳಿದ 8 ಜನ ಅಭ್ಯರ್ಥಿಗಳು ಇತ್ತ ಸುಳಿದಿಲ್ಲ. ಈ ಕ್ಷೇತ್ರದಲ್ಲಿ ಬಿಜೆಪಿಯನ್ನು ವಿರೋಧಿಸುತ್ತಿರುವ ಸಿಪಿಎಂ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿ ಸಮಾವೇಶಗಳನ್ನು ನಡೆಸಿದೆ ಎಂಬುದು ಗಮನಾರ್ಹ ಅಂಶ.
ಕ್ಷೇತ್ರವು ಶಿವಮೊಗ್ಗ ಜಿಲ್ಲೆ ಅಲ್ಲದೆ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೂ ವ್ಯಾಪಿಸಿರುವುದು ಈ ಕ್ಷೇತ್ರದ ಒಂದು ವೈಶಿಷ್ಟ್ಯ. ಅದೇ ಕಾರಣಕ್ಕಾಗಿ ಗೆಲುವಿನ ಮೇಲೆ ಕಣ್ಣಿಟ್ಟಿರುವ ಅಭ್ಯರ್ಥಿಗಳು ದೂರದ ಬೈಂದೂರಿನ ಮತದಾರರನ್ನು ತಮ್ಮತ್ತ ಸೆಳೆಯಲು ವಿವಿಧ ಪ್ರಚಾರ ತಂತ್ರಗಳನ್ನು ಬಳಸುವ ಅನಿವಾರ್ಯತೆಗೆ ಒಳಗಾಗಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.
ಬೈಂದೂರು ವಿಧಾನಸಭಾ ಕ್ಷೇತ್ರ ಕರಾವಳಿ ಮತ್ತು ಅರೆಮಲೆನಾಡು ಪ್ರದೇಶವನ್ನು ಒಳಗೊಂಡಿರುವ ಕಾರಣ ಶಿವಮೊಗ್ಗ ಕ್ಷೇತ್ರದ ಉಳಿದ ಭಾಗಕ್ಕಿಂತ ಭಿನ್ನವಾಗಿದೆ. ಭೌಗೋಳಿಕ ಸ್ಥಿತಿ, ಮತದಾರರ ಜಾತಿ ಸಮೀಕರಣ, ಜನರ ಬದುಕಿನ ವಿಧಾನ, ವೃತ್ತಿ ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳೂ ಭಿನ್ನವಾಗಿವೆ. ಹಲವು ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಹುರಿಯಾಳುಗಳಿಗೆ ಒಲಿಯುತ್ತಾ ಬಂದಿದ್ದ ಈ ಕ್ಷೇತ್ರ ಕಳೆದ ಚುನಾವಣೆಯಲ್ಲಿ ಬಿಜೆಪಿ ಪಾಲಾಯಿತು. ಆ ಬಳಿಕ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಬಿ. ವೈ. ರಾಘವೇಂದ್ರ ಇಲ್ಲಿ ಮಧು ಬಂಗಾರಪ್ಪ ಅವರಿಗಿಂತ 14 ಸಾವಿರ ಅಧಿಕ ಮತ ಗಳಿಸಿದ್ದರು. ಈ ಬಾರಿ ಬಿಜೆಪಿ ಈ ಅಂತರವನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಮೈತ್ರಿಕೂಟ ಹೇಗಾದರೂ ಮಶಡಿ ಮೇಲುಗೈ ಸಾಧಿಸಲು ಹೆಣಗುತ್ತಿದೆ.
ಬಿಜೆಪಿ ಮೋದಿ ಅಲೆಯ ಲಾಭದ ನಿರೀಕ್ಷೆಯಲ್ಲಿದೆ. ಮೈತ್ರಿ ಅಭ್ಯರ್ಥಿ ಕಾಂಗ್ರೆಸ್‌ನ ಪಾರಂಪರಿಕ ಮತಗಳನ್ನು ಮರಳಿ ಪಡೆಯುವುದರ ಜತೆಗೆ ತಂದೆ ಬಂಗಾರಪ್ಪ ಅವರ ಕೊಡುಗೆಗಳನ್ನು ಮತದಾರರಿಗೆ ನೆನಪಿಸಿ ಅನುಕಂಪ ಗಿಟ್ಟಿಸುವ ತಂತ್ರ ಬಳಸುತ್ತಿದ್ದಾರೆ. ಬಿಜೆಪಿ ಪರ ಪ್ರಚಾರದ ನೇತೃತ್ವವನ್ನು ಶಾಸಕ ಬಿ. ಎಂ. ಸುಕುಮಾರಶೆಟ್ಟಿ ವಹಿಸಿದ್ದರೆ, ಮಧು ಬಂಗಾರಪ್ಪ ಮಾಜಿ ಶಾಸಕ, ಕಾಂಗ್ರೆಸ್‌ನ ಕೆ. ಗೋಪಾಲ ಪೂಜಾರಿ ಬಳಗವನ್ನು ಬಹುವಾಗಿ ನೆಚ್ಚಿಕೊಂಡಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.
ನಾಯಕರ ಬಹಿರಂಗ ಸಭೆಗಳು, ಪತ್ರಿಕಾ ಗೋಷ್ಠಿಗಳು, ಕಾರ್ಯಕರ್ತರಿಂದ ತಣ್ಣಗಿನ ಮನೆಮನೆ ಪ್ರಚಾರ ನಡೆದಿವೆ. ಕುಡಿಯುವ ನೀರಿನ ಅಭಾವ, ಮರಳಿನ ಕೊರತೆ, ಸಮುದ್ರ ಕೊರೆತ, ಮೀನುಗಾರಿಕಾ ಬಂದರು ಕಾಮಗಾರಿಯ ನಡೆ, ಕಸ್ತೂರಿ ರಂಗನ್ ಸಮಿತಿ ವರದಿ ಅನುಷ್ಠಾನ, ಅರಣ್ಯ ಭೂಮಿ ಒತ್ತುವರಿ, ಡೀಮ್ಡ್ ಫಾರೆಸ್ಟ್ ಕುರಿತಾದ ಸ್ಥಳೀಯ ಸಮಸ್ಯೆಗಳು ಚುನಾವಣೆಯ ವಿಷಯಗಳಾಗುವ ಬದಲು ಮೋದಿ ವಿರುದ್ಧ ರಾಹುಲ್ ಎನ್ನುವುದೇ ಪ್ರಮುಖ ವಿಚಾರ ಎನಿಸಿರುವುದು ಈ ಬಾರಿಯ ಇಲ್ಲಿನ ವಿಶೇಷ. ಹಾಗಾಗಿ ಈ ಕ್ಷೇತ್ರದಲ್ಲಿ ಯಾರು ಅನುಕೂಲ ಪಡೆಯಬಹುದು ಎನ್ನುವುದನ್ನು ಅರಿಯಲು ಚುನಾವಣಾ ಫಲಿತಾಂಶದ ವರೆಗೆ ಕಾಯಬೇಕಿದೆ.