ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಆಧುನಿಕ ಯುಗದಲ್ಲಿ ಎಲ್ಲರೂ ಧಾವಂತದಲ್ಲಿದ್ದಾರೆ. ಪರಿಶ್ರಮದಿಂದ ಕೆಲಸ ಮಾಡುವ ಮನೋಭಾವ ಕಡಿಮೆ ಆಗುತ್ತಿದೆ. ಮಾಡುವ ಕೆಲಸದಲ್ಲಿ ಶ್ರದ್ಧೆ ವಹಿಸಿದರೆ ಬದುಕಿನಲ್ಲಿ ಯಶಸ್ಸು ಅರಸಿಕೊಂಡು ಬರುತ್ತದೆ ಎಂದು ನಟ, ನಿರ್ದೇಶಕ ರಘು ಪಾಂಡೇಶ್ವರ ಹೇಳಿದರು.
ಅವರು ಭಾನುವಾರ ಇಲ್ಲಿನ ಶಾರದಾ ವೇದಿಕೆಯಲ್ಲಿ ನಡೆದ ಡಾ| ಬಿ. ಆರ್. ಅಂಬೇಡ್ಕರ್ ಸಂಘದ ಬೆಳ್ಳಿಹಬ್ಬ ಸಮಾರಂಭದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ ಎಲ್ಲರ ಬದುಕಿನಲ್ಲಿಯೂ ಉತ್ತಮ ಸಮಯ, ಅವಕಾಶಗಳು ಬಂದೆ ಬರುತ್ತದೆ. ಆದರೆ ಅದನ್ನು ಉಪಯೋಗಿಸಿಕೊಳ್ಳುವಲ್ಲಿ ವಿಫಲರಾದರೆ ಮತ್ತೆ ಅದು ಸಿಗಲಾರದು. ಅವಕಾಶದೊಂದಿಗೆ ಪರಿಶ್ರಮವಿದ್ದರೆ ಗೆಲುವಿನ ದಾರಿ ಸುಲಭವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ ಬೈಂದೂರು ಚಂದ್ರಶೇಖರ ನಾವಡ ಮಾತನಾಡಿ ಉತ್ತಮ ಶಿಕ್ಷಣ, ಪರಿಶ್ರಮದ ಜೊತೆಗೆ ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಂಡರೆ ದಲಿತ ಸಮುದಾಯ ಆತ್ಮವಿಶ್ವಾಸದಿಂದ ಸಮಾಜದ ಮುಖ್ಯವಾಹಿನಿಯೊಂದಿಗೆ ಬೆರೆಯಬಹುದು. ಈ ನಿಟ್ಟಿನಲ್ಲಿ ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಶಿಸ್ತುಬದ್ಧ ಜೀವನ ಕ್ರಮ ಅಳವಡಿಸಿಕೊಳ್ಳಲು ಮಾರ್ಗದರ್ಶನ ಮಾಡಬೇಕಿದೆ ಎಂದರು.
ಲಾವಣ್ಯ ಬೈಂದೂರು ಅಧ್ಯಕ್ಷ ಉದಯ ಆಚಾರ್ ಮತ್ತು ಪತ್ರಕರ್ತ ಸುನಿಲ್ ಹೆಚ್. ಜಿ. ಬೈಂದೂರು ಅತಿಥಿಗಳಾಗಿದ್ದರು.ಅಂಬೇಡ್ಕರ್ ಸಂಘದ ಹಿಂದಿನ ಅಧ್ಯಕ್ಷ ಕಾರ್ಯದರ್ಶಿಗಳನ್ನು ಸನ್ಮಾನಿಸಲಾಯಿತು.
ಸನ್ಮಾನಿತರ ಪರವಾಗಿ ಬೆಳ್ಳಿ ಹಬ್ಬದ ಸಮಿತಿ ಅಧ್ಯಕ್ಷ ರಂಗ ಯಡ್ತರೆ ಅನಿಸಿಕೆ ವ್ಯಕ್ತಡಿಸಿದರು. ಬೆಳ್ಳಿ ಹಬ್ಬದ ಸಮಿತಿ ಕಾರ್ಯದರ್ಶಿ ವಿಘ್ನೇಶ್ವರ ಯಡ್ತರೆ ಸಂಘದ ವರದಿ ವಾಚಿಸಿದರು. ಸಂಘದ ಅಧ್ಯಕ್ಷ ಲಕ್ಷಣ ಯಡ್ತರೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪಿ. ದಯಾನಂದ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುವರ್ಣ ಪ್ರತಿಷ್ಠಾನ ಮಂಗಳೂರು ಪ್ರಸ್ತುತಿಯ ಸದಾನಂದ ಸುವರ್ಣ ನಿರ್ದೇಶನದ ಕೋರ್ಟ್ ಮಾರ್ಷಲ್ ನಾಟಕ ಪ್ರದರ್ಶನಗೊಂಡಿತು.