ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಾಸ್ತವ ಒಪ್ಪಿಕೊಂಡರೆ ವಾಸ್ತುಬೇಕಿಲ್ಲ. ಸತ್ಯ ಹೇಳುವವನಿಗೆ ಅಂಜಿಕೆ ಇಲ್ಲ. ಮನುಷ್ಯನ ಕಣ್ಣು ತಪ್ಪಿಸಿ ತಪ್ಪು ಮಾಡಿದರೂ ಭಗವಂತನ ಕಣ್ಣನ್ನು ಮುಚ್ಚಿಸಲು ಸಾಧ್ಯವಿಲ್ಲ. ಸೃಷ್ಠಿ ಇರುವುದು ಎಷ್ಟು ಸತ್ಯವೋ ಹಾಗೆ ಸೃಷ್ಠಿಕರ್ತ ಇರುವುದೂ ಅಷ್ಟೇ ಸತ್ಯ ಎಂದು ಸ್ವರ್ಣ ಪೀಠಿಕಾಪುರ ಗೌರಿಗದ್ದೆ ದತ್ತ ಆಶ್ರಮದ ಶ್ರೀ ವಿನಯ ಗುರೂಜಿ ಹೇಳಿದರು.
ಗುರುವಾರ ಇಲ್ಲಿನ 11ನೇ ಉಳ್ಳೂರು ಮೇಕೋಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪುನರಷ್ಟಬಂಧ ಪ್ರತಿಷ್ಠೆ, ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಎಲ್ಲರ ಹಾಗೆ ಇದ್ದು, ಎಲ್ಲರ ಹಾಗೆ ಬದುಕಿ ಪ್ರಪಂಚಕ್ಕೆ ಒಳ್ಳೆಯದನ್ನು ಕೊಟ್ಟು ಹೋಗುವವನು ಅವತಾರಿ. ಆತ ಅವದೂತನಲ್ಲ. ತನ್ನದೂ ಅದೇ ಮಾರ್ಗ. ಸಮಾಜದ ಕಟ್ಟಕಡೆಯ ಜನರಿಗೆ ಉತ್ತಮ ಜೀವನ ಕಲ್ಪಿಸುವುದು ತನ್ನು ಗುರಿ ಎಂಬುದನ್ನು ಪ್ರತಿಪಾದಿಸಿದ ಅವರು ಮೂಡನಂಬಿಕೆ, ಕಂದಾಚಾರಗಳಿಗೆ ಬಲಿ ಬೀಳಬೇಡಿ. ದೇಶ, ಸಮಾಜ, ಹಳ್ಳಿ ಜನರ ಸೇವೆ ಮಾಡಿ. ಹೊಟ್ಟೆಕಿಚ್ಚು, ಸುಳ್ಳು ಹೇಳುವುದನ್ನು ಬಿಟ್ಟು ಸಮಾಜಕ್ಕಾಗಿ ಕೆಲಸ ಮಾಡಿ ಜಾತಿಯ ವಿಷವನ್ನು ದೂರವಿರಿಸಿ ಎಂದು ಭಕ್ತರಿಗೆ ಸಲಹೆಯಿತ್ತರು.
ನಮ್ಮಲ್ಲಿನ ಅತಿಯಾದ ಆಡಂಬರದಿಂದ ಹಿಂದು ಧರ್ಮ ಹಾಳಾಗಿದೆ. ಬಾಹ್ಯಕ್ಕೆ ನೀಡುವ ಪ್ರಾಧಾನ್ಯತೆಯ ನಡುವೆ ಧರ್ಮದ ಅಂತರಾರ್ಥ ತಿಳಿಯಲು ಇಂದಿಗೂ ಪ್ರಯತ್ನ ಪಟ್ಟಿಲ್ಲ. ನಮ್ಮಲ್ಲಿನ ಉದಾಸಿನ ಒತ್ತಡಕ್ಕೆ ಕಾರಣ. ಎಲ್ಲರೂ ದುಡಿದರೆ ಮನೆಯಲ್ಲಿ ಮಹಾಲಕ್ಷ್ಮೀ ಹೋಮ ಬೇಡ. ಹೊಟ್ಟೆಕಿಚ್ಚು ಬಿಡಿ, ಮುಖ ತಿರುಗಿಸಬೇಡಿ. ಮಕ್ಕಳಿಗೆ ವಿದ್ಯೆ ಕೊಡಿ. ಆಸ್ತಿ ಮಾಡಬೇಡಿ. ಸತ್ಯವನ್ನು ಸ್ವೀಕಾರ ಮಾಡಿದರೆ ಮನಸ್ಸು ನಿಶ್ಕಲ್ಮಷವಾಗುತ್ತದೆ ಎಂದು ಸಲಹೆಯಿತ್ತರು.
ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಆಡಳಿತ ಧರ್ಮದರ್ಶಿ ಹರೀಶಕುಮಾರ್ ಶೆಟ್ಟಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಹಿರಿಯ ಪತ್ರಕರ್ತ ಎಸ್. ಜನಾರ್ದನ ಮರವಂತೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ ಕುಮಾರ್ ಶೆಟ್ಟಿ ಉಪ್ರಳ್ಳಿ ಉಪಸ್ಥಿತರಿದ್ದರು.
ಮೇಕೋಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಧರ್ಮದರ್ಶಿ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕ ವಿಶ್ವನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

























