ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ : ಮರವಂತೆ ಮೀನುಗಾರಿಕಾ ಹೊರಬಂದರು ಕಾಮಗಾರಿ ಒಂದು ವರ್ಷದಿಂದ ಅಪೂರ್ಣ ಸ್ಥಿತಿಯಲ್ಲಿ ನಿಂತುಹೋಗಿದೆ. ಅದನ್ನು ಪೂರ್ಣಗೊಳಿಸಲು ಅಗತ್ಯವಿರುವ ರೂ. 35 ಕೋಟಿ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಒಪ್ಪಿಸಿದ ಪ್ರಸ್ತಾವನೆಗೆ ಶೀಘ್ರ ಮಂಜೂರಾತಿ ಪಡೆಯಲಾಗುವುದು ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು.
ಮರವಂತೆ ಕರಾವಳಿ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸಿದ ವೇಳೆ ಮೀನುಗಾರರನ್ನು ಉದ್ದೇಶಿಸಿ ಮಾತನಾಡಿದರು. ಮರವಂತೆಯ ಹಲವೆಡೆ ನಡೆಯುತ್ತಿರುವ ಕಡಲ್ಕೊರೆತ, ಅದನ್ನು ತಡೆಯುವ ಮತ್ತು ಕೆಟ್ಟು ಹೋಗಿರುವ ಕರಾವಳಿ ಮಾರ್ಗದ ದುರಸ್ತಿ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ, ಮೀನುಗಾರರೊಡನೆ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದರು. ತೀರ ಅಪಾಯಕಾರಿಯಾಗಿ ಕಂಡುಬಂದಿರುವ 110 ಮೀಟರ್ ಉದ್ದದ ತೀರದಲ್ಲಿ ಈಗಾಗಲೆ ನಿರ್ಮಿಸಿರುವ ತಡೆಗೋಡೆಯನ್ನು ಇನ್ನೂ ಒಂದೂವರೆ ಮೀಟರ್ ಎತ್ತರಿಸಲು ಯಾವುದಾದರೂ ಮೂಲದಿಂದ ಪ್ರಕೃತಿವಿಕೋಪ ಅಥವಾ ಅನ್ಯ ತುರ್ತು ಪರಿಹಾರ ನಿಧಿಯಿಂದ ಹಣ ಬಿಡುಗಡೆಗೊಳಿಸುವಂತೆ ಜಿಲ್ಲಾಧಿಕಾರಿಗೆ ಹಾಗೂ ನಾಬಾರ್ಡ್ ಆರ್‌ಎಡಿ ನಿಧಿಯಿಂದ ಈ ಉದ್ದೇಶಕ್ಕೆ ಮಂಜೂರಾದ ರೂ 25 ಲಕ್ಷ ಬಿಡುಗಡೆಗೊಳಿಸುವಂತೆ ಹಾಗೂ ರಸ್ತೆ ಅಭಿವೃದ್ಧಿಗೆ ಸಲ್ಲಿಸಲಾಗಿರುವ ರೂ 90 ಲಕ್ಷ ಮೊತ್ತದ ಅಂದಾಜು ಪಟ್ಟಿಗೆ ಶೀಘ್ರ ಮಂಜೂರಾತಿ ನೀಡುವಂತೆ ಮೀನುಗಾರಿಕಾ ನಿರ್ದೇಶಕರಿಗೆ ಫೋನ್ ಕರೆ ಮಾಡಿದರು.
ಮರವಂತೆ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸಿದ ವಿವರ ನೀಡಿದ ಶಾಸಕರು ಮದಗದ ರಸ್ತೆಗೆ ರೂ 4 ಲಕ್ಷ, ಹೈಮಾಸ್ಟ್ ದೀಪಕ್ಕೆ ರೂ 1 ಲಕ್ಷ, ನೀರೋಣಿ ತೋಡು ಅಭಿವೃದ್ಧಿಗೆ ರೂ 25 ಲಕ್ಷ, ವಿವೇಕಾನಂದ ಮಾರ್ಗ ಅಭಿವೃದ್ಧಿಗೆ ರೂ 4 ಲಕ್ಷ, ಸರ್ಕಾರಿ ಹಿರಿಯ ಪ್ರಾಥಮಿಕಶಾಲೆಯ ದುರಸ್ತಿಗೆ ರೂ 3 ಲಕ್ಷ, ಜಟ್ಟಿಗೇಶ್ವರ ಮಾರ್ಗ ಮತ್ತು ಸಾಧನಾ ಮಾರ್ಗ ಅಭಿವೃದ್ಧಿಗೆ ರೂ 80 ಲಕ್ಷ, ಮೀನುಗಾರಿಕಾ ರಸ್ತೆಗೆ ರೂ 5 ಲಕ್ಷ, ಗೋರಿಕೆರೆ ಬಳಿ ಕಾಲುಸಂಕ ರಚನೆಗೆ ರೂ. 5ಲಕ್ಷ, ಅಡಿಗಳಹಿತ್ಲು ರಸ್ತೆಗೆ ರೂ 5 ಲಕ್ಷ ಮತ್ತು ಹೊಳೆಬಾಗಿಲು ನಾಗಪ್ಪಯ್ಯ ಮಾರ್ಗ ಅಭಿವೃದ್ಧಿಗೆ ರೂ 2 ಲಕ್ಷ ಕೊಡಲಾಗಿದೆ ಎಂದರು.
ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಉದಯಕುಮಾರ ಶೆಟ್ಟಿ, ಸಹಾಯಕ ಇಂಜಿನಿಯರ್ ವಿಜಯ ಶೆಟ್ಟಿ, ಗ್ರಾಮ ಕರಣಿಕ ಆದರ್ಶ ಪದ್ಮಶಾಲಿ, ಮೀನುಗಾರರ ಸೇವಾ ಸಮಿತಿಯ ಅಧ್ಯಕ್ಷ ಮೋಹನ ಖಾರ್ವಿ, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಭಾಕರ ಖಾರ್ವಿ, ಲೋಕೇಶ ಖಾರ್ವಿ, ಮುಖಂಡರಾದ ವೆಂಕಟರಮಣ ಖಾರ್ವಿ, ಸತೀಶ ಖಾರ್ವಿ, ವಾಸು ಖಾರ್ವಿ ಇದ್ದರು.