ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ.
ಕಾಲೇಜು ದಿನಗಳಲ್ಲಿ ಕಿವಿಗೆ ಬಿದ್ದ ಚಪ್ಪಾಳೆಯ ಸದ್ದು ಬಣ್ಣದ ಲೋಕದ ಕಡೆಗೆ ತಿರುಗುವಂತೆ ಮಾಡಿತು. ಬಣ್ಣದ ಲೋಕದಲ್ಲಿಯೇ ಏನಾದರೂ ಸಾಧಿಸಬೇಕು ಎಂಬ ಛಲ ಸಿನೆಮಾದ ನಾಯಕನನ್ನಾಗಿಸಿತು. ಹೌದು ಕ್ಷೇತ್ರ ಯಾವುದೇ ಇರಲಿ ಆಸಕ್ತಿ ಹಾಗೂ ಛಲವೊಂದಿದ್ದರೆ ಕಂಡ ಕನಸನ್ನು ನನಸಾಗಿಸಿಕೊಳ್ಳುವುದು ಕಷ್ಟವೇನಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಕುಂದಾಪುರದ ಹುಡುಗ, ಸಮಯದ ಹಿಂದೆ ಸವಾರಿ ಚಿತ್ರದ ನಾಯಕ ನಟ ರಾಹುಲ್ ಹೆಗ್ಡೆ.
ಪತ್ರಕರ್ತ ಲೇಖಕ ಜೋಗಿ ಅವರ ‘ನದಿಯ ನೆನಪಿನ ಹಂಗು’ ಕಾದಂಬರಿಯ ಎಳೆಯನ್ನಿಟ್ಟುಕೊಂಡು, ಹೆಸರಾಂತ ಸಂಗೀತಕಾರ, ರಂಗಕರ್ಮಿ ರಾಜ್‌ಗುರು ಹೊಸಕೋಟಿ ಅವರ ನಿರ್ದೇಶನದಲ್ಲಿ ಮೂಡಿಬಂದ ಸಿನೆಮಾ ’ಸಮಯದ ಹಿಂದೆ ಸವಾರಿ. ವಿಭಿನ್ನ ಕಥಾವಸ್ತುವಿನೊಂದಿಗೆ ಪ್ರೇಕ್ಷಕರನ್ನು ಎದಿರುಗೊಳ್ಳಬೇಕು ಎಂಬ ಸಿನೆಮಾ ತಂಡದ ಇಂಗಿತದಂತೆ ಪತ್ತೆದಾರಿ ಎಳೆಯನ್ನು ಹೊಂದಿದೆ. ಕುಂದಾಪುರದ ಹುಡುಗ ರಾಹುಲ್ ನಾಯಕ ನಟನಾಗಿ ಮೊದಲ ಭಾರಿಗೆ ತೆರೆಯ ಮೇಲೆ ರಘುನಂದನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸಿನೆಮಾದಲ್ಲಿ ಸ್ನೇಹಿತನ ಸಾವಿನ ಬಳಿಕ ನಡೆಯುವ ಘಟನೆಗಳು, ಅದರ ಹಿಂದಿನ ಕೌತುಕವೇ ಸಿನೆಮಾದ ಕಥಾ ವಸ್ತು. ಕುಂದಾಪ್ರ ಡಾಟ್ ಕಾಂ ವರದಿ.
ರಾಹುಲ್ ಹೆಗ್ಡೆ ಅವರ ಬಂಟ್ ಲಯನ್ ಫಿಲಮ್ಸ್ ಇಂಟರ್‌ನ್ಯಾಶನಲ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣಗೊಳ್ಳುತ್ತಿದ್ದು, ಅವರೊಂದಿಗೆ ರಂಜಿತ್ ಹೆಗ್ಡೆ ಹಾಗೂ ಪ್ರವೀಣ್ ಹೆಗ್ಡೆ ಸಿನೆಮಾ ನಿರ್ಮಾಣ ವಿಭಾಗದಲ್ಲಿ ಕೈಜೋಡಿಸಿದ್ದಾರೆ. ರಂಗಭೂಮಿ ಹಾಗೂ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡ ರಾಜ್‌ಗುರು ಹೊಸಕೋಟಿ ಅವರು ಈ ಸಿನೆಮಾದ ನಿರ್ದೇಶನದೊಂದಿಗೆ ಸಾಹಿತ್ಯ, ಸಂಗೀತ, ಚಿತ್ರಕಥೆ, ಸಂಭಾಷಣೆ ವಿಭಾಗಗಳ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಕುಂದಾಪುರದ ಹಳಗೇರಿ ಸುನೀತ್ ಹಳಗೇರಿ ಅವರು ಛಾಯಾಗ್ರಹಣ ಮಾಡಿದ್ದಾರೆ. ಪ್ರಕೃತಿ ಗ್ಲೋರಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಕುಂದಾಪುರದ ಕಾವ್ರಾಡಿ, ಬಸ್ರೂರು, ಮಂದರ್ತಿ, ಕುಂದಾಪುರ ಪೇಟೆ, ವಂಡ್ಸೆ ಮೊದಲಾದ ಭಾಗಗಳಲ್ಲಿ ಚಿತ್ರೀಕರಣ ನಡೆದಿದೆ. ಸಿನೆಮಾದಲ್ಲಿ ಬಹುಪಾಲು ಕಲಾವಿದರು ಮೊದಲ ಭಾರಿಗೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ರಂಗಭೂಮಿಯಲ್ಲಿ ರಾಜ್‌ಗುರು ಹೊಸಕೋಟಿ ಹಾಗೂ ನಯನಾ ಸೂಡ ದಂಪತಿಗಳ ಕನಸಿನ ಕೂಸು ರಂಗಪಯಣ ತಂಡ ಹಾಗೂ ಸಾತ್ವಿಕ ತಂಡದ ಸದಸ್ಯರು ಸಿನೆಮಾದಲ್ಲಿ ಬಣ್ಣ ಹಚ್ಚಿದ್ದಾರೆ.
ಕಾವ್ರಾಡಿಯ ಹುಡುಗ ರಾಹುಲ್ ಹೆಗ್ಡೆ:
ಕುಂದಾಪುರ ತಾಲೂಕಿನ ಕಾವ್ರಾಡಿಯ ಭಾನುಪ್ರಕಾಶ್ ಹೆಗ್ಡೆ ಹಾಗೂ ಮಾಲತಿ ಹೆಗ್ಡೆ ದಂಪತಿಗಳ ಪುತ್ರರಾದ ರಾಹುಲ್ ಹೆಗ್ಡೆ. ಮಗಳು ಸಿರಿ ಶೆಟ್ಟಿ ಮದುವೆಯ ಬಳಿಕ ಮುಂಬೈನಲ್ಲಿ ನೆಲೆಸಿದ್ದಾರೆ. ರಾಹುಲ್ ಅವರ ಪ್ರಾಥಮಿಕ ಶಿಕ್ಷಣ ಬೆಂಗಳೂರಿನಲ್ಲಿಯೂ 9 ಹಾಗೂ 10ನೇ ತರಗತಿ ಕುಂದಾಪುರದಲ್ಲಿಯೂ ಮಾಡಿದರೆ, ಮಣಿಪಾಲದಲ್ಲಿ ಡಿಪ್ಲೋಮಾ, ನಿಟ್ಟೆಯಲ್ಲಿ ಇಂಜಿನಿಯರಿಂಗ್ ಪದವಿ ಪೂರೈಸಿದ್ದಾರೆ. ಶಿಕ್ಷಣದ ಬಳಿಕ ಮನೆಯವರ ಒತ್ತಾಸೆಯಂತೆ 2 ವರ್ಷ ಕುವೈತ್‌ನಲ್ಲಿ ಉದ್ಯೋಗಿಯಾಗಿದ್ದರು.
ರಾಹುಲ್ ಅವರನ್ನು ಸಿನೆಮಾ ಕ್ಷೇತ್ರ ಕೈಬೀಸಿ ಕರೆಯುತ್ತಿತ್ತು. ಹಾಗಾಗಿ ಕುವೈತ್‌ಗೆ ಗುಡ್‌ಬೈ ಹೇಳಿ ಸಿನೆಮಾದ ಹಿಂದೆ ಬಿದ್ದರು. ಆರಂಭದಲ್ಲಿ ಒಂದು ಸಿನೆಮಾದಲ್ಲಿ ತೊಡಗಿಸಿಕೊಂಡರೂ ಬೇರೆ ಬೇರೆ ಕಾರಣದಿಂದ ಅದು ಮುಂದುವರಿಯಲ್ಲಿಲ್ಲ. ನಿರ್ದೇಶಕರ ಬಳಿ ತೆರಳಿದಾಗ ಕೋಟಿ ಕೋಟಿ ಹಣದ ಮಾತನಾಡುತ್ತಿದ್ದರು. ಹಾಗಾಗಿ ತಾನೇ ಯಾಕೆ ಸಿನೆಮಾ ನಿರ್ಮಿಸಬಾರದು ಎಂಬ ಆಲೋಚನೆ ಅವರ ಸ್ನೇಹಿತರ ಮೂಲಕ ರಾಜ್‌ಗುರು ಹೊಸ್ಕೋಟೆ ಅವರನ್ನು ಭೇಟಿಯಾಗುವಂತೆ ಮಾಡಿತು. ರಾಜ್‌ಗುರು ಹೊಸಕೋಟಿ ಅವರು ಜೋಗಿ ಅವರ ಕಾದಂಬರಿಯನ್ನು ಆಧರಿಸಿಯೇ ಬಲ್ಲ ಮೂಲಗಳ ಪ್ರಕಾರ ಎಂಬ ನಾಟಕ ನಿರ್ದೇಶಿಸಿದ್ದರು. ಅದೇ ಮುಂದೆ ಚಿತ್ರಕಥೆ ಆಯಿತು. ನಿರ್ಮಾಪಕರನ್ನು ಹುಡುಕುವುದು ಕಷ್ಟವೆನಿಸಿದಾಗ ರಾಹುಲ್ ಹೆಗ್ಡೆ ಸ್ನೇಹಿತರೊಂದಿಗೆ ಸೇರಿ ಹಣ ತೊಡಗಿಸಲು ಮುಂದಾದರು.
ಅಂದ ಹಾಗೇ ರಾಹುಲ್ ಅವರಿಗೆ ಮೊದಲು ನಟನಾಗಬೇಕು ಎಂಬ ಹಂಬಲವಿದ್ದಿರಲಿಲ್ಲ. ಕಾಲೇಜಿಗೆ ಬರುವ ಮೊದಲು ಅದರ ಅಂದಾಜು ಇರಲಿಲ್ಲ. ನಿಟ್ಟೆಯಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದ ಸಂದರ್ಭ ಸಿನೆಮಾ ತಂಡವೊಂದು ಶೂಟಿಂಗ್ ನಡೆಸುತ್ತಿತ್ತು. ಒಬ್ಬ ನಟ ಸಣ್ಣ ಡೈಲಾಗ್‌ಗಾಗಿ ಹಲವು ಟೇಕ್ ತೆಗೆದುಕೊಂಡಿದ್ದರು. ಆ ಸಿನೆಮಾದ ನಿರ್ದೇಶಕರಿಗೆ ಸಮಾಧಾನವಾಗದಿದ್ದಾಗ ಅಲ್ಲಿದ್ದ ವಿಧ್ಯಾರ್ಥಿಗಳಿಗೆ ಡೈಲಾಗ್ ಹೇಳಲು ಅವಕಾಶ ನೀಡಿದ್ದರು. ನಟಿಸಲು ಮುಂದೆ ಬಂದ ರಾಹುಲ್ ಒಂದೇ ಟೇಕ್‌ನಲ್ಲಿ ಡೈಲಾಗ್ ಹೇಳಿಬಿಟ್ಟರು. ನಿರ್ದೇಶಕರು ಖುಷಿಯಾದರು, ಸುತ್ತಲೂ ನೆರೆದಿದ್ದ ಸ್ನೇಹಿತರೂ ಶಿಳ್ಳೆ, ಚಪ್ಪಾಳೆ ಹೊಡೆದರು. ಇದು ರಾಹುಲ್ ಅವರಿಗೆ ನಟನಾಗಬಹುದು ಎಂಬ ಆಸೆ ಚಿಗುರುವುಂತೆ ಮಾಡಿತು. ಕಾಲೇಜು ಮುಗಿಸಿದ ಬಳಿಕ ಮುಂದೆ ಮನೆಯವರ ಒತ್ತಾಯಕ್ಕೆ ಎರಡು ವರ್ಷ ಬೇರೆ ವೃತ್ತಿಯಲ್ಲಿದ್ದರು. ಆದರೆ ಸಿನೆಮಾದ ಸೆಳತ ಅವರನ್ನು ಬಿಡಲಿಲ್ಲ. ಮತ್ತೆ ಊರಿಗೆ ಬಂದು ಸಿನೆಮಾದತ್ತ ಮುಖಮಾಡಿದರು. ಸಿನೆಮಾ ರಂಗ ರಾಹುಲ್ ಅವರನ್ನು ಹೂವಿನ ಹಾಸಿಗೆ ಹಾಕಿ ಸ್ವಾಗತಿಸಲಿಲ್ಲ. ಸಿನೆಮಾ ನಿರ್ದೇಶಕ, ನಿರ್ಮಾಪಕರ ಮನೆಗಳಿಗೆ ತಿರುಗಿ ಅವರೂ ಚಪ್ಪಲಿ ಸವೆಸಿದ್ದಾರೆ. ಒಂದು ಸಿನೆಮಾ ಸಿಕ್ಕಿತಾದರೂ ಅದೂ ಅರ್ಧದಲ್ಲಿಯೇ ನಿಂತು ಹೋಯಿತು. ಆದರೆ ಕೊನೆಗೆ ರಾಹುಲ್ ನಾಯಕನಾಗುವ ಸಮಯವೂ ಬಂತು. ಈಗ ಸಮಯದ ಹಿಂದೆ ಸವಾರಿ ಹೊರಟಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.