ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ, ಸೆ.19: ಕುಂದಾಪುರ ಕಂದಾಯ ಉಪವಿಭಾಗದ ನೂತನ ಉಪವಿಭಾಗಾಧಿಕಾರಿಗೆ ಎರಡು ದಿನದ ಹಿಂದೆ ಅಧಿಕಾರ ಹಸ್ತಾಂತರ ಮಾಡಿದ್ದ ಉಪವಿಭಾಗಾಧಿಕಾರಿ ಡಾ.ಎಸ್.ಎಸ್.ಮಧುಕೇಶ್ವರ ಮನೆಯ ಮೇಲೆ ಗುರುವಾರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೆಎಎಸ್ ಶ್ರೇಣಿ ಅಧಿಕಾರಿಯಾಗಿದ್ದ ಮಧುಕೇಶ್ವರ ಮಂಗಳವಾರ ನೂತನ ಉಪವಿಭಾಗಾಧಿಕಾರಿಯಾಗಿ ಬಂದಿದ್ದ ಎ. ರಾಜು ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದರು. ಆಧಿಕಾರ ಹಸ್ತಾಂತರ ಮಾಡಿದ ಬಳಿಕವೂ ಉಪವಿಭಾಗಾಧಿಕಾರಿ ಕಚೇರಿಗೆ ಸಂಬಂಧಿಸಿದ ಕಡತಗಳನ್ನು ಮಿನಿ ವಿಧಾನಸೌಧಕ್ಕೆ ಸಮೀಪದಲ್ಲಿ ಇರುವ ಉಪವಿಭಾಗಾಧಿಕಾರಿಗಳ ಅಧಿಕೃತ ನಿವಾಸದಲ್ಲಿ ವಿಲೆವಾರಿ ಮಾಡುತ್ತಿದ್ದಾರೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಎಸಿಬಿ ತಂಡ ದಾಳಿ ನಡೆಸಿದೆ.
ಎಸಿಬಿ ಡಿವೈಎಸ್‌ಪಿ ಮಂಜುನಾಥ ಕವರಿ ನೇತ್ರತ್ವದ ತಂಡ ನಡೆಸಿದ ದಾಳಿಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 24 ಅಧಿಕೃತ ಕಡತ ಹಾಗೂ 1.28 ಲಕ್ಷ ರೂ. ಆರಂಭದಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಸಂಜೆಯವರೆಗೂ ಎಸಿಬಿ ತಂಡ ದಾಖಲೆಗಳ ಪರಿಶೀಲನೆ ಮುಂದುವರಿಸಿ ಸುಮಾರು 1,80,000 ಹಣವನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.

ಈ ಹಿಂದೆಯೂ ಈ ಅಧಿಕಾರಿಯ ಮೇಲೆ ಭ್ರಷ್ಟಾಚಾರ ಆರೋಪಗಳ ಕುರಿತು ದೂರು ಅರ್ಜಿಗಳು ದಾಖಲಾಗಿತ್ತು. ಕುಂದಾಪುರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಇಲಾಖೆ, ಸಿಬ್ಬಂದಿ ಹಾಗೂ ಅಧಿಕಾರಿಗಳ ಮೇಲೆ ಈ ಹಿಂದೆ ಲೋಕಾಯುಕ್ತ ಹಾಗೂ ಭ್ರಷ್ಟಾಚಾರ ನಿಗ್ರಹ ದಳಗಳು ದಾಳಿ ನಡೆಸಿರುವ ಸಾಕಷ್ಟು ಪ್ರಕರಣಗಳು ಇದ್ದರೂ, ಉಪವಿಭಾಗ ವ್ಯಾಪ್ತಿಯ ಅಧಿಕಾರ ಹೊಂದಿದ್ದ ಹಿರಿಯ ಶ್ರೇಣಿಯ ಕೆಎಎಸ್ ಆಧಿಕಾರಿಯ ಮನೆ ಮೇಲೆ ದಾಳಿ ನಡೆದಿರುವುದು ಇದೆ ಮೊದಲ ಬಾರಿ ಎನ್ನಲಾಗುತ್ತಿದೆ.
ಕಳೆದ ಆರು ತಿಂಗಳ ಹಿಂದೆ ಕುಂದಾಪುರಕ್ಕೆ ಎಸಿಯಾಗಿ ಬಂದಿದ್ದ ಡಾ.ಎಸ್.ಎಸ್.ಮಧುಕೇಶ್ವರ್ ವರ್ಗಾವಣೆಗೊಂಡಿದ್ದು, ನೂತನ ಎಸಿ ಕೆ.ರಾಜು ಅವರಿಗೆ ಮಂಗಳವಾರ ಅಧಿಕಾರ ಹಸ್ತಾಂತರಿಸಿದ್ದರು. ಆದರೂ ಮಧುಕೇಶ್ವರ್ ಲ್ಯಾಂಡಿಗೆ ಸಂಬಂಧಿಸಿ ಪೈಲ್‌ಗಳ ಮನೆಯಲ್ಲಿ ಇಟ್ಟುಕೊಂಡಿದ್ದು ಏಕೆ ಎನ್ನೋದು ಸಾರ್ವಜನಿಕರ ಪ್ರಶ್ನೆ. ಗುರುವಾರ ಮನೆಯಲ್ಲಿ ಫೈಲ್‌ಗಳಿಗೆ ಸಹಿ ಮಾಡಿ, ಸಂಜೆ ಬೆಂಗಳೂರಿಗೆ ಹೊರಡುವವರಿದ್ದರು ಮಧುಕೇಶ್ವರ್. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಪೈಲ್‌ಗಳ ವಿಲೇವಾರಿ ಮಾಡಿ, ಬೆಂಗಳೂರು ಸೇರಿ ಬಚಾವಾಗಿತ್ತಿದ್ದರು. ಅಷ್ಟರಲ್ಲಿ ವಕೀಲರು ದೂರು ನೀಡಿದ್ದರಿಂದ ಎಸಿಬಿ ಬಲೆಗೆ ಬಿದ್ದಿದ್ದಾರೆ. ಅದಲ್ಲದೆ ಹೆಮ್ಮಾಡಿ ಮೀನು ಸಂಷ್ಕರಣಾ ಘಟಕ ಅಮೋನಿಯ ಸೋರಿಕೆ ಹಿನ್ನೆಲೆಯಲ್ಲಿ ರಚಿಸಿದ ಸಮಿತಿಯಲ್ಲಿ ಎಸಿ ಮಧುಕೇಶ್ವರ್ ಮುಖ್ಯಸ್ಥರಾಗಿದ್ದು, ಮೀನು ಘಟಕದಿಂದ ಲಂಚ ಪಡೆದಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದರು.















