ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಾಲಾ ಕಾಲೇಜಿನಲ್ಲಿ ಉತ್ತಮ ಶಿಕ್ಷಣದ ಮೂಲಕ ಉತ್ತಮ ಬದುಕು ರೂಪಿಸುವ ಶಿಕ್ಷಕರಿಗೆ ಗೌರವ ಕೊಡುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಆದ್ಯ ಕರ್ತವ್ಯ. ತಂದೆ-ತಾಯಿಯ ಸಂಬಂಧದಂತೆ ಗುರು-ಶಿಷ್ಯರ ಸಂಬಂಧ ಅತ್ಯಂತ ಗೌರವಯುತವಾದುದು ಹಾಗೆಯೇ ಸಂಸ್ಥೆಯ ಶ್ರೇಯೋಭಿವೃದ್ಧಿಯಲ್ಲಿ ಪ್ರಾಕ್ತನ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದು ಎಂದು ಬೈಂದೂರು ಶಾಸಕ, ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು.
ಅವರು ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ದಶಮಾನೋತ್ಸವ ವರ್ಷಾಚರಣೆಯ ಭಾಗವಾಗಿ ರಚಿಸಲಾದ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಹಳೆ ವಿದ್ಯಾರ್ಥಿ, ಉಡುಪಿ ಎಮ್.ಜಿ.ಎಮ್. ಕಾಲೇಜಿನ ಉಪನ್ಯಾಸಕ ರಾಮಚಂದ್ರ ಭಟ್ ದಿಕ್ಸೂಚಿ ಭಾಷಣ ಮಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಕೊತ್ತಾಡಿ ಉಮೇಶ್ ಶೆಟ್ಟಿ, ಉಪ ಪ್ರಾಂಶುಪಾಲ ಚೇತನ್ ಶಟ್ಟಿ ಕೋವಾಡಿ, ಊರ್ಮನಿ ಅಂಗಡಿ ಡಾಟ್‌ಕಾಮ್‌ನ ಸಂಸ್ಥಾಪಕ ವಿ. ಗೌತಮ್ ನಾವಡ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅರ್ಜುನ್ ಬಿ. ನಾಯ್ಕ್, ಕಾರ್ಯದರ್ಶಿ ಸುದೀಪ್ ಶೆಟ್ಟಿ, ಉಪಾಧ್ಯಕ್ಷರಾದ ಭರತ್ ಶೆಟ್ಟಿ, ಸಂದೇಶ್ ಕುಮಾರ್ ಹಳ್ನಾಡು, ಜತೆ ಕಾರ್ಯದರ್ಶಿ ವಿದ್ಯಾವತಿ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಸೀತಾಲಕ್ಷ್ಮಿ ರಾವ್, ಸಂಘಟನಾ ಕಾರ್ಯದರ್ಶಿಗಳಾದ ಶಿವಕುಮಾರ್, ಸಚಿನ್ ಪೂಜಾರಿ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿಗಳಾದ ದೀಪಾ ಪೂಜಾರಿ ಮತ್ತು ಆಶಾ ಶೆಟ್ಟಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಸಂಘದ ಸದಸ್ಯೆ ಸ್ವಸ್ತಿ ಆರ್ ಶೆಟ್ಟಿ ಸ್ವಾಗತಿಸಿ, ಖಜಾಂಚಿ ಯೋಗೀಶ್ ಶಾನುಭೋಗ್ ವಂದಿಸಿದರು. ಸಾಂಸ್ಕೃತಿಕ ಸಮಿತಿಯ ಶ್ರೀಕರ್ ಪುರಾಣಿಕ್ ಕಾರ್ಯಕ್ರಮ ನಿರ್ವಹಿಸಿದರು.