ಬೈಂದೂರು: ಜೂ.17ರಂದು ಹತ್ಯೇಗೀಡಾದ ಬೈಂದೂರು ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ ನಿವಾಸಕ್ಕೆ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಭೇಟಿನೀಡಿ ಕುಂಟುಂಬಕ್ಕೆ ಸಾಂತ್ವಾನ ಹೇಳಿದರು.
ಬಳಿಕ ಮಾಧ್ಯಮ ಪ್ರತಿನಿಧಿಗೊಂದಿಗೆ ಮಾತನಾಡಿದ ಅವರು ಪ್ರತಿಭಾವಂತ ವಿದ್ಯಾರ್ಥಿನಿ ಅಕ್ಷತಾನ್ನು ಕಳೆದುಕೊಂಡಿರುವುದು ಎಲ್ಲರಿಗೂ ನೋವು ತಂದಿದೆ. ಅಕ್ಷತಾ ಇಂಜಿನೀಯರ್ ಆಗುವ ಕನಸನ್ನು ಹೊತ್ತಿದ್ದಳು. ಅವಳ ಕನಸನ್ನು ಆಕೆಯ ತಂಗಿಯರು ನೆರವೇರಿಸುವಂತಾಗಲಿ. ಅವರ ಶಿಕ್ಷಣಕ್ಕೆ ಅಗತ್ಯ ನೆರವನ್ನು ಸರಕಾರದಿಂದ ಕೊಡಿಸುವುದಾಗಿ ತಿಳಿಸಿದ ಅವರು, ಹೇನುಬೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ದುರಸ್ತಿಯ ಬಗ್ಗೆ ಕ್ಷೇತ್ರದ ಶಾಸಕರು ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ತಾನೂ ಕೂಡ ಇಲಾಖೆಯೊಂದಿಗೆ ಚರ್ಚಿಸಿ ಶೀಘ್ರ ಕಾಮಗಾರಿ ನಡೆಸುವಂತೆ ಮಾತನಾಡುತ್ತೇನೆ ಎಂದರು.
ಅಕ್ಷತಾ ಕುಟುಂಬದ ಹೆಣ್ಣುಮಗಳೊಬ್ಬಳಿಗೆ ಸರಕಾರಿ ಕೆಲಸ ದೊರೆಯುವ ತನಕ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ದೊರಕಿಸಿಕೊಡುವುದಾಗಿ ತಿಳಿಸಿದರು.
ಈ ಸಂದರ್ಭ ಬೈಂದೂರು ಕ್ಷೇತ್ರದ ಶಾಸಕ ಗೋಪಾಲ ಪೂಜಾರಿ, ತಾ.ಪಂ. ಸದಸ್ಯ ರಾಜು ಪೂಜಾರಿ, ಕಾಂಗ್ರೆಸ್ ಮುಖಂಡರುಗಳಾದ ಎ೦.ಎ.ಗಪೂರ್, ರಾಜು ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.