ಬೈಂದೂರು: ಜೂ.17ರಂದು ಹತ್ಯೇಗೀಡಾದ ಬೈಂದೂರು ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ ನಿವಾಸಕ್ಕೆ ಸಂಸದ ಬಿ. ಎಸ್. ಯಡಿಯೂರಪ್ಪ ಭೇಟಿ ನೀಡಿ ಕುಟುಂಬಿಕರಿಗೆ ಸಾಂತ್ವಾನ ಹೇಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಘಟನೆ ನಡೆದಾಗಿನಿಂದಲೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ನಿರಂತರ ಸಂಪರ್ಕದಲ್ಲಿದ್ದು ಪ್ರಕರಣದ ಮಾಹಿತಿ ಪಡೆದುಕೊಂಡಿದ್ದೇನೆ. ಪ್ರಕರಣದಲ್ಲಿ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಇನ್ನೂ ಯಾರಾದರೂ ಭಾಗಿಯಾಗಿದ್ದರೇ ಅವರನ್ನೂ ಬಂಧಿಸುವಂತೆ ತಿಳಿಸಿದ್ದೇನೆ ಎಂದರು.
ಅಕ್ಷತಾಳ ಡೈರಿಯನ್ನು ನೋಡಿದರೆ ಆಕೆಯ ದೂರದೃಷ್ಟಿ ಎಷ್ಟಿತ್ತು ಎಂಬುದು ತಿಳಿಯುತ್ತೆ. ಆಕೆಯ ಮೊದಲ ತಂಗಿಯ ಎಸ್.ಎಸ್.ಎಲ್.ಸಿ ಶಿಕ್ಷಣ ಪೂರ್ಣಗೊಂಡ ಬಳಿಕ ಆಕೆಯನ್ನು ಶಿಕ್ಷಣಿಕ ಉದ್ದೇಶಕ್ಕೆ ದತ್ತು ತೆಗೆದುಕೊಳ್ಳಲು ಬೈಂದೂರು ಬಿಜೆಪಿ ಅಧ್ಯಕ್ಷ ಸುಕುಮಾರ್ ಶೆಟ್ಟಿ ಅವರಿಗೆ ಸೂಚಿಸಿದ್ದೇನೆ. ಪೊಲೀಸರಿಂದ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ಜಿಲ್ಲಾಧಿಕಾರಿಗಳ ನಿಧಿಯಿಂದ 3 ಲಕ್ಷ ಪರಿಹಾರ ದೊರೆಯಲಿದೆ. ಇಲ್ಲಿನ ರಸ್ತೆ ದುರಸ್ತಿಗೆ ಸಂಸದರ ನಿಧಿಯಿಂದ 5 ಲಕ್ಷ ಅನುದಾನ ಹಾಗೂ ಸರಕಾರಿ ಬಸ್ ಓಡಾಟಕ್ಕೆ ಕಾನೂನು ಕ್ರಮ ಕೈಕೊಳ್ಳುತ್ತೇನೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕಾರ್ಯದರ್ಶಿ ಗುರುರಾಜ ಶೆಟ್ಟಿ ಗಂಟಿಹೊಳೆ, ಜಿ.ಪಂ ಸದಸ್ಯರುಗಳಾದ ಬಾಬು ಶೆಟ್ಟಿ, ಗೀತಾಂಜಲಿ ಸುವರ್ಣ, ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸುಕುಮಾರ್ ಶೆಟ್ಟಿ, ಬಿಜೆಪಿ ರಾಜ್ಯ ರೈತಮೋರ್ಚಾದ ಉಪಾಧ್ಯಕ್ಷ ದೀಪಕಕುಮಾರ್ ಶೆಟ್ಟಿ, ಗ್ರಾ.ಪಂ ಸದಸ್ಯರುಗಳಾದ ಸದಾಶಿವ ಪಡುವರಿ, ಸುರೇಶ್ ಬಟವಾಡಿ, ಭಾಸ್ಕರ್ ನಾಯಕ್, ವೆಂಕಟ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.