ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತುಳುನಾಡ ಪರಂಪರೆಯ ವೀರ ಪುರುಷರಾದ ಕೋಟಿ ಚೆನ್ನಯ್ಯರು ತಮ್ಮ ಮೌಲ್ಯಯತ ಬದುಕಿನ ಮೂಲಕ ಸಮಾಜಕ್ಕೆ ಸಂದೇಶವನ್ನು ನೀಡಿದ ವೀರ ಪುರುಷರು. ಅವರ ಕೊನೆಯ ಗರಡಿ ಜೀರ್ಣೋದ್ಧಾರಗೊಳ್ಳುತ್ತಿರುವುದು ಸಂತೋಷದ ಸಂಗತಿಯಾಗಿದ್ದು ಎಲ್ಲರೂ ಭಕ್ತಿಪೂರ್ವಕವಾಗಿ ಕೈಜೋಡಿಸಬೇಕಿದೆ ಎಂದು ವೇದಮೂರ್ತಿ ಕೇಂಜ ಶ್ರೀಧರ ತಂತ್ರಿ ಹೇಳಿದರು.
ಭಾನುವಾರ ಅವರು ಜೀರ್ಣೋದ್ಧಾರಗೊಳ್ಳುತ್ತಿರುವ ನಾಕಟ್ಟೆ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಯ ಪುನರ್ ಪ್ರತಿಷ್ಠೆ, ಬ್ರಹ್ಮಕಶೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ದಿನ ನಿಗದಿಪಡಿಸಿ ಬಳಿಕ ಮಾತನಾಡಿದರು.
2020ರ ಎಪ್ರಿಲ್ 5 ರಿಂದ 12ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಎ.5ರಂದು ವಿಗ್ರಹ ತರುವುದು, ಎ.6ರಂದು ಆಚಾರಿ ಸೇವೆ, ವಾಸ್ತು, ಹೊರೆಕಾಣಿಕೆ, ಎ.7ರಂದು ಶಯ್ಯಾಧಿವಾಸ, ಎ.8ರಂದು ಪ್ರತಿಷ್ಠೆ, ಎ.9ರಂದು ಬ್ರಹ್ಮಕಲಶೋತ್ಸವ, ಎ.10ರಂದು ಅಗೆಲು ಸೇವೆ, ಎ.11 ಗೆಂಡ ಸೇವೆ, ಪಂಜುರ್ಲಿ ಕೋಲ, ಎ.12ರಂದು ಬ್ರಹ್ಮಬೈದರ್ಕಳ ಕೋಲ ನಡೆಯುವ ಬಗ್ಗೆ ದಿನ ನಿಗದಿಪಡಿಸಲಾಯಿತು.
ಈ ಸಂದರ್ಭ ಉಪಸ್ಥಿತರಿದ್ದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ ಕೋಟಿ ಚೆನ್ನಯ್ಯರ ಮೊದಲ ಗರಡಿ ಜೀರ್ಣೋದ್ಧಾರಗೊಳ್ಳುತ್ತಿರುವ ಹೊತ್ತಿನಲ್ಲಿಯೇ ಕೊನೆಯ ಗರಡಿಯು ಜೀರ್ಣೋದ್ಧಾರಗೊಳ್ಳುತ್ತಿರುವುದು ವಿಶೇಷ. ಗರಡಿಯ ಸುಂದರ ಕಲಾಕೃತಿ ಹಾಗೂ ಕಳೆಗಟ್ಟುತ್ತಿರುವ ಪರಿಸರ ಭಕ್ತರನ್ನು ಆಕರ್ಷಿಸುತ್ತದೆ ಎಂದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್. ರಾಜು ಪೂಜಾರಿ ಮಾತನಾಡಿ ಮುಂದಿನ ಮೂರು ತಿಂಗಳುಗಳ ಒಳಗಾಗಿ ಗರಡಿಯ ಕಾಮಗಾರಿಯನ್ನು ಪೂರ್ಣಗೊಳಿಸಬೇಕಾಗಿದ್ದು, ಊರಿನ ಎಲ್ಲರ ಸಹಕಾರವೂ ಅಗತ್ಯವಿದೆ. ಧಾರ್ಮಿಕ ಕಾರ್ಯದಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಇದ್ದಾಗ ಮಾತ್ರ ಅದು ಯಶಸ್ಸನ್ನು ಕಾಣಲು ಸಾಧ್ಯವಿದೆ ಎಂದರು.
ಸ್ಥಳೀಯರಾದ ನಾಕಟ್ಟೆ ಜಗನ್ನಾಥ ಶೆಟ್ಟಿ, ನಾರಾಯಣ ಹೆಗ್ಡೆ ತಗ್ಗರ್ಸೆ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ವೆಂಕಟ ಪೂಜಾರಿ ಸಸಿಹಿತ್ಲು, ಅರ್ಚಕ ಕುಟುಂಬದ ಮಂಜುನಾಥ ಮೇಲ್ಹಿತ್ಲು, ಕಾರ್ಯದರ್ಶಿ ಶಿವರಾಮ ಪೂಜಾರಿ ಯಡ್ತರೆ ಮೊದಲಾದವರು ಉಪಸ್ಥಿತರಿದ್ದರು.
















