ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸೌಹಾರ್ದ ಸಹಕಾರಿಗಳ ಮಾತೃ ಸಂಸ್ಥೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ನೀಡುತ್ತಿರುವ ಶ್ರೇಷ್ಠ ಸಹಕಾರಿ ರಾಜ್ಯ ಪ್ರಶಸ್ತಿಗೆ ಸಹಕಾರಿ ಧುರೀಣ, ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ನ ಅಧ್ಯಕ್ಷ ಎಸ್. ರಾಜು ಪೂಜಾರಿ ಅವರು ಆಯ್ಕೆಯಾಗಿದ್ದಾರೆ.
ಮೂರು ದಶಕಗಳಿಂದ ಸಹಕಾರ ಕ್ಷೇತ್ರದಲ್ಲಿ ಅವಿರತರವಾಗಿ ತೊಡಗಿಸಿಕೊಂಡಿರುವ ಎಸ್. ರಾಜು ಪೂಜಾರಿ ಅವರ ಸಾಧನೆಗಾಗಿ 2019ನೇ ಸಾಲಿನ ಶ್ರೇಷ್ಠ ಸಹಕಾರಿ ಪ್ರಶಸ್ತಿ ನೀಡಲಾಗುತ್ತಿದ್ದು, ನ.20ರ ಬುಧವಾರ ಮೈಸೂರು ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಸಂಯುಕ್ತ ಸಹಕಾರಿ ನೇತೃತ್ವದಲ್ಲಿ ನಡೆಯುತ್ತಿರುವ 66ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಪುರಸ್ಕರಿಸಲಾಗುತ್ತಿದೆ. ಕುಂದಾಪ್ರ ಡಾಟ್ ಕಾಂ.
ಸಹಕಾರಿ ಧುರೀಣ:
ರಾಜು ಪೂಜಾರಿ ಅವರು ವಿವಿಧ ಸಹಕಾರಿಗಳ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ, ನಿರ್ದೇಶಕರಾಗಿ ತೊಡಗಿಸಿಕೊಂಡು ಜನಸಾಮಾನ್ಯರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿಸುವತ್ತ ದಿಟ್ಟ ಹೆಜ್ಜೆಯಿಟ್ಟವರು. ಕಳೆದ 10 ವರ್ಷಗಳಿಂದ ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್‌ನ ಅಧ್ಯಕ್ಷರಾಗಿ ಸಂಸ್ಥೆಯನ್ನು ಮಾದರಿಯಾಗಿ ರೂಪಿಸಿದ ಹೆಗ್ಗಳಿಕೆ ಅವರದ್ದು. 25ವರ್ಷಗಳಿಂದ ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ; ಮರವಂತೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸ್ಥಾಪಕ ನಿರ್ದೇಶಕರಾಗಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ದ.ಕ. ಕೃಷಿ ಅಭಿವೃದ್ಧಿ ಸಹಕಾರಿ ಸಂಘ ಸ್ಕ್ಯಾಡ್ಸ್, ಟಿಎಪಿಸಿಎಂಎಸ್, ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ, ಯಡ್ತರೆ ಹಾಲು ಉತ್ಪಾದರ ಸಹಕಾರಿ ಸಂಘ ಮುಂತಾದವುಗಳ ನಿರ್ದೇಶಕರಾಗಿ; ಸಾಗರ್ ಕ್ರೆಡಿಟ್ ಕೋ-ಆಪರೇಟಿವ್‌ನ ಸ್ಥಾಪಕ ನಿರ್ದೇಶಕ ಹಾಗೂ ಉಪಾಧ್ಯಕ್ಷರಾಗಿ, ಸೇವೆ ಸಲ್ಲಿಸುತ್ತಿದ್ದಾರೆ.

ಉಡುಪಿ ಜಿಲ್ಲೆ ಬೈಂದೂರು ತಾಲೂಕು ಯಡ್ತರೆಯವರಾದ ಎಸ್. ರಾಜು ಪೂಜಾರಿ ಅವರು ಬಿ.ಕಾಂ ಪದವೀಧರರು. ವಿದ್ಯಾರ್ಥಿ ಜೀವನದಲ್ಲೇ ಸಾಮಾಜಿಕ ರಂಗದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಅವರು ರಾಜಕೀಯ, ಸಹಕಾರಿ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ತಮ್ಮ ಅಭಿವೃದ್ಧಿಯ ಚಿಂತನೆ, ಸಂಘಟನಾ ಚತುರತೆಯಿಂದ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದಾರೆ. ಕುಂದಾಪ್ರ ಡಾಟ್ ಕಾಂ.
ಸಹಕಾರಿ ಕ್ಷೇತ್ರದ ಜೊತೆ ಜೊತೆಗೆ ರಾಜಕೀಯ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸುತ್ತಿರುವ ಅವರು ಕುಂದಾಪುರ ತಾಲೂಕು ಪಂಚಾಯತ್ ಸದಸ್ಯರಾಗಿ, ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ, ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದಲ್ಲದೇ ರಾಜಕೀಯ ಪಕ್ಷದಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ಜನಸೇವೆಯಲ್ಲಿ ನಿರತರಾಗಿದ್ದಾರೆ. ಕುಂದಾಪ್ರ ಡಾಟ್ ಕಾಂ.















