ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಾಗೂರಿನ ಕುಸುಮಾ ಫೌಂಡೇಶನ್‌ನ ಬ್ಲಾಸಂ ಸಂಗೀತ ನೃತ್ಯಶಾಲೆಯ ಆಶ್ರಯದಲ್ಲಿ ತಿಂಗಳ ಸಂಗೀತ ಕಾರ್ಯಕ್ರಮ ’ಗಾನಯಾನ-3’ ಅಲ್ಲಿನ ಕೆಎಎಸ್ ಆಡಿಟೋರಿಯಂನಲ್ಲಿ ನಡೆಯಿತು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಫೌಂಡೇಶನ್‌ನ ಕಾರ್ಯನಿರ್ವಾಹಕ ವಿಶ್ವಸ್ಥ ನಳಿನ್‌ಕುಮಾರ ಶೆಟ್ಟಿ ಪರಿಸರದ ಕಲಾಸಕ್ತ ಮಕ್ಕಳಿಗೆ ಪರಿಣತರಿಂದ ಸಂಗೀತ, ನೃತ್ಯ ತರಗತಿಗಳನ್ನು ನಡೆಸಲಾಗುತ್ತಿದೆ. ಅದರೊಂದಿಗೆ ಪರಿಸರದ ಜನರಲ್ಲಿ ಲಲಿತ ಕಲೆಗಳತ್ತ ಒಲವು ಮೂಡಿಸಲು ಪ್ರತಿ ತಿಂಗಳು ಸಂಗೀತ, ನೃತ್ಯ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಇದಕ್ಕೆ ಎಲ್ಲರ ಪ್ರೋತ್ಸಾಹ ಅಗತ್ಯ ಎಂದರು.
ಆ ಬಳಿಕ ನಡೆದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಚೇರಿಯಲ್ಲಿ ಭಟ್ಕಳ ಮಾರುಕೇರಿಯ ವಿದ್ವಾನ್ ಅನಂತ ಹೆಬ್ಬಾರ್ ಗಾಯನ ಪ್ರಸ್ತುತಪಡಿಸಿದರು. ಶಿರಾಲಿಯ ಮಹಾಬಲೇಶ್ವರ ಹೆಗಡೆ ಹಾರ್ಮೋನಿಯಂ ಮತ್ತು ಭಟ್ಕಳ ಕೊಣಾರದ ಬಾಲಚಂದ್ರ ಹೆಬ್ಬಾರ್ ತಬಲಾ ಸಹವಾದನ ನೀಡಿದರು. ಸಂಗೀತ ಶಿಕ್ಷಕಿ ಶ್ವೇತಾ ಮತ್ತು ಸುಬ್ರಹ್ಮಣ್ಯ ತಾನಪುರಾದಲ್ಲಿ ಸಹಕರಿಸಿದರು. ಕಿರಿಮಂಜೇಶ್ವರದ ಸುಮಾ-ಅರುಣ್‌ಕುಮಾರ್ ಶ್ಯಾನುಭೋಗ್ ದಂಪತಿ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದರು. ಕಲಾವಿದರನ್ನು ಮತ್ತು ಪ್ರಾಯೋಜಕರನ್ನು ಫೌಂಡೇಶನ್ ವತಿಯಿಂದ ಸನ್ಮಾನಿಸಲಾಯಿತು. ಡಾ. ಬಾಲಚಂದ್ರ ಭಟ್ ಮತ್ತು ತುಲಸಿದಾಸ ಗಡಿಯಾರ್ ನಿರ್ವಹಿಸಿದರು.