ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು : ಭವಿಷ್ಯದ ಸಾಧನೆಗಳಿಗೆ ಶಿಕ್ಷಣವೇ ಅಡಿಪಾಯ. ಶಿಕ್ಷಣ ಸಂಸ್ಥೆಗಳಿಗೆ ಆಡಳಿತ ಮತ್ತು ಸರ್ಕಾರ ಒದಗಿಸುವ ಸೌಲಭ್ಯಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ನೋಡಿಕೊಳ್ಳಬೇಕಾದ ಹೊಣೆ ಶಾಲೆಗಳ ಮೇಲಿದೆ ಎಂದು ಕುಂದಾಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಎಸ್. ಕುಂದರ್ ಹೇಳಿದರು.
ಈಚೆಗೆ ನಡೆದ ಅರೆಶಿರೂರಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಪ್ರೌಢಶಾಲೆಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ, ಶಾಲೆಯ ನೂತನ ಅಡುಗೆಕೋಣೆಯನ್ನು ಉದ್ಘಾಟಿಸಿದ ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿ ಶಾಲೆಗೆ ದೇವಳ ಆಡಳಿತದಿಂದ ಎಲ್ಲ ಅಗತ್ಯ ಬೆಂಬಲ ನೀಡಲಾಗುವುದು ಎಂದರು. ಬೈಂದೂರು ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ರಘು ನಾಯ್ಕ್ ಶಿಕ್ಷಣದ ಮಹತ್ವದ ಕುರಿತು ಮಾತನಾಡಿದರು. ಶಾಲೆಯ ಮೊದಲ ಎಸ್ಸೆಸ್ಸೆಲ್ಸಿ ತರಗತಿಯ ವಿದ್ಯಾರ್ಥಿ ಜಾನ್ಸನ್ ಫೆರ್ನಾಂಡೀಸ್ ಸ್ವಸ್ತಿವಾಚನ ಮಾಡಿದರು.
ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಡಾ. ಅತುಲ್‌ಕುಮಾರ ಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜು ಪೂಜಾರಿ, ಸ್ಥಳೀಯ ಉದ್ಯಮಿ ಶ್ರೀಕಾಂತ ಪೂಜಾರಿ, ಜಿಲ್ಲಾ ಟ್ಯಾಕ್ಷಿಮೆನ್ ಮತ್ತು ಮ್ಯಾಕ್ಷಿ ಕ್ಯಾಬ್ ಅಸೋಸಿಯೇಶನ್ ಉಪಾಧ್ಯಕ್ಷ ಮಂಜ ಪೂಜಾರಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕರುಣಾಕರ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಮುಖ್ಯೋಪಾಧ್ಯಾಯ ಎ. ಶಿವರಾಮ ಸ್ವಾಗತಿಸಿದರು. ಶಿಕ್ಷಕ ವೇಣುಗೋಪಾಲ ಶೆಟ್ಟಿ ವಂದಿಸಿದರು. ಗೀತಾ ಎಚ್, ಪ್ರಶಾಂತ ಶ್ಯಾನುಭಾಗ್, ಉದಯ ನಾಯ್ಕ್, ಗೋವಿಂದ ಗೊಂಡ ವಿವಿಧ ಹೊಣೆ ನಿರ್ವಹಿಸಿದರು. ರಾಜೀವ ಶೆಟ್ಟಿ, ಗೋವಿಂದ ಗೌಡ ನಿರೂಪಿಸಿದರು. ಶಾಲಾ ಮುಖ್ಯಮಂತ್ರಿ ನಿತೀಶ್ ಗೌಡ ಇದ್ದರು. ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದುವು.