ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು : ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಲ್ಲೂರಿನಿಂದ ಶಿರೂರು ವರೆಗಿನ ಚತುಷ್ಪಥ ಹೆದ್ದಾರಿ ಕಾಮಗಾರಿ ತೀರ ಅವ್ಯವಸ್ಥಿತವಾಗಿ ನಡೆದಿದ್ದು ಅದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಮರವಂತೆಯಿಂದ ಬೈಂದೂರು ವರೆಗೆ ಹಮ್ಮಿಕೊಂಡ ಪಾದಯಾತ್ರೆಗೆ ಮರವಂತೆಯಲ್ಲಿ ಚಾಲನೆ ದೊರೆಯಿತು.
ಹೆದ್ದಾರಿ ಬದಿ ಸೂಕ್ತ ಚರಂಡಿ ಇಲ್ಲವಾದುದರಿಂದ ಮಳೆಗಾಲದಲ್ಲಿ ಹೆದ್ದಾರಿ ಮೇಲೆ ನೀರು ಹರಿಯುತ್ತದೆ. ಕೆಲವೆಡೆ ಕೃತಕ ನೆರೆ ಏರ್ಪಟ್ಟು ಕೃಷಿ ಭೂಮಿಗೆ, ಮನೆಗಳಿಗೆ ನುಗ್ಗಿ ಅನಾಹುತ ಸೃಷ್ಟಿಸುತ್ತಿದೆ. ಅದು ಸರಿಯಾಗಬೇಕು. ಪ್ರತೀ ಮೂರು ಕಿಲೋಮೀಟರಿಗೆ ಒಂದರಂತೆ ನಿರ್ಮಿಸಿರುವ ಯು ತಿರುವುಗಳು ರಾಷ್ಟ್ರೀಯ ಹೆದ್ದಾರಿ ವಿನ್ಯಾಸ ಹಾಗೂ ಗುಣಮಟ್ಟದವುಗಳಲ್ಲ. ಅಲ್ಲಿಯೇ ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. ಅವುಗಳನ್ನು ಅಪಾಯಹಿತ ಸ್ಥಿತಿಗೆ ತರಬೇಕು. ಬೈಂದೂರು-ಕೊಲ್ಲೂರು ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿತವಾಗಿದೆ. ಅದು ಹೆದ್ದಾರಿಗೆ ಸೇರುವ ಯಡ್ತರೆ ಜಂಕ್ಷನ್‌ನಲ್ಲಿ ಅಂಡರ್ ಪಾಸ್ ನಿರ್ಮಿಸದಿದ್ದರೆ ಪರಿಣಾಮವನ್ನು ಊಹಿಸಲೂ ಅಸಾಧ್ಯ. ಜನ, ಸಂಚಾರ ದಟ್ಟಣೆ ಇರುವೆಡೆ ಸಮಾನಾಂತರ ಸರ್ವೀಸ್ ರಸ್ತೆ ಬೇಕು. ಹೆದ್ದಾರಿ ಕಾಮಗಾರಿ ನಡೆಸುವಾಗ ಗ್ರಾಮ ಪಂಚಾಯಿತಿಗಳ ಕುಡಿಯುವ ನೀರಿನ ಪೈಪ್‌ಗಳನ್ನು ನಾಶಪಡಿಸಿದ್ದು, ಅವುಗಳ ದುರಸ್ತಿಯಾಗಬೇಕು ಎನ್ನುವ ಆಗ್ರಹ ಮುಂದಿಟ್ಟುಕೊಂಡು ಪಾದಯಾತ್ರೆ ನಡೆಸಲಾಗುತ್ತಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಕೆಪಿಸಿಸಿ ಸದಸ್ಯ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನ್‌ಕುಮಾರ್, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪಕುಮಾರ್ ಶೆಟ್ಟಿ, ಪ್ರಮುಖರಾದ ಎಸ್. ರಾಜು ಪೂಜಾರಿ, ಗೌರಿ ದೇವಾಡಿಗ, ಜಗದೀಶ ದೇವಾಡಿಗ, ನಾಗರಾಜ ಗಾಣಿಗ, ಮೋಹನ ಪೂಜಾರಿ, ಬೈಂದೂರು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ ಸೇರಿದಂತೆ ವಿವಿಧ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಬೈಂದೂರಿನಲ್ಲಿ ಸಭೆ ನಡೆಯುತ್ತದೆ.