ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಸೇನೇಶ್ವರ ಕಲಾ ಮತ್ತು ಕ್ರೀಡಾ ಸಂಘದ ವತಿಯಿಂದ ಪ್ರತಿಭಾ, ಪುರಸ್ಕಾರ, ಅಶಕ್ತರಿಗೆ ನೆರವು, ಹುಟ್ಟೂರ ಸನ್ಮಾನ ಹಾಗೂ ೬೦ ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ್ – ಬೈಂದೂರು ಚಾಂಪಿಯನ್ ಟ್ರೋಫಿ ೨೦೧೯ ಇದರ ಉದ್ಘಾಟನಾ ಸಮಾರಂಭ ಶನಿವಾರ ಗಾಂಧಿ ಮೈದಾನದಲ್ಲಿ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ಬೈಂದೂರು ತಾಲೂಕು ಹೋರಾಟ ಹಾಗೂ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಿ. ಜಗನ್ನಾಥ ಶೆಟ್ಟಿ ಮಾತನಾಡಿ ಸಂಘ ಸಂಸ್ಥೆಗಳು ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಿ, ಅವರ ಪ್ರತಿಭೆಯ ಅನಾವರಣಕ್ಕೆ ಸೂಕ್ತ ಅವಕಾಶಕಲ್ಪಿಸಿಕೊಡಬೇಕಾಗಿದೆ ಎಂದರು.
ಈ ಸಂಘ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ, ಉತ್ತೇಜಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದ ಅವರು ಮುಂದಿನ ದಿನಗಳಲ್ಲಿ ಈ ಸಂಘಟನೆ ಇನ್ನಷ್ಟು ಸಮಾಜಮುಖಿ ಕೈಂಕರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಶುಭ ಹಾರೈಸಿದರು.
ಗ್ರಾ.ಪಂ. ಅಧ್ಯಕ್ಷೆ ಮೂಕಾಂಬು ದೇವಾಡಿಗ, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೋಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ, ಸಂಘದ ಗೌರವಾಧ್ಯಕ್ಷ ರಾಮಕೃಷ್ಣ ಪಿ. ದೇವಾಡಿಗ, ಕಾರ್ಯದರ್ಶಿ ಸಂತೋಷ್ ಪೂಜಾರಿ ಜೆ.ಡಿ. ಉಪಸ್ಥಿತರಿದ್ದರು.
ಉದ್ಯಮ ಕ್ಷೇತ್ರದ ಸಾಧನೆಗಾಗಿ ಧಾರವಾಡ ಉದ್ಯಮಿ ಯು.ಬಿ. ಶೆಟ್ಟಿ ಸಹಕಾರ ಕ್ಷೇತ್ರದ ಸಾಧನೆಗಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಸಹಕಾರಿ ಧುರೀಣ ಎಸ್. ರಾಜು ಪ್ರಜಾರಿ, ಸಮಾಜಸೇವಾ ಕ್ಷೇತ್ರದ ಸಾಧನೆಗಾಗಿ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟಿನ್ ಮ್ಯಾನೇಜಿಂಗ್ ಟ್ರಸ್ಟಿ ಗೋವಿಂದ ಬಾಬು ಪೂಜಾರಿ ಬಿಜೂರು ಜ್ಯೋತಿಷ್ಯ ಕ್ಷೇತ್ರದ ಸಾಧನೆಗಾಗಿ ಖ್ಯಾತ ಜ್ಯೋತಿಷಿ ಡಾ. ಮಹೇಂದ್ರ ಭಟ್ ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಡಾ. ಉದಯ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಅಶಕ್ತರಿಗೆ ಸಹಾಯಧನ ವಿತರಿಸಲಾಯಿತು. ಆರ್.ಜೆ ನಯನ ಅವರನ್ನು ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ನೆಲ್ಯಾಡಿ ಸ್ವಾಗತಿಸಿದರು, ಅರುಣಕುಮಾರ್ ಶಿರೂರು, ಆರ್.ಜೆ. ನಯನಾ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಖ್ಯಾತ ಬಡಗು ಮತ್ತು ತೆಂಕು ಕಲಾವಿದರ ಸಮಾಗಮದಲ್ಲಿ ರಾಘವೇಂದ್ರ ಆಚಾರ್ಯ ಜನ್ಸಾಲೆ ಹಾಗೂ ಪಟ್ಲ ಸತೀಶ ಶೆಟ್ಟಿ ಸಾರಥ್ಯದಲ್ಲಿ ಅದ್ಧೂರಿ ಯಕ್ಷಗಾನ ಗಾನ-ನಾಟ್ಯ-ವೈಭವ ನೆರವೇರಿತು.