ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸರ್ವರ ಸಹಕಾರವಿದ್ದಾಗ ಮಾತ್ರ ಸರಕಾರಿ ಶಾಲೆ ಪ್ರಗತಿ ಸಾಧಿಸಲು ಸಾಧ್ಯ. ಮೂಲಭೂತ ಸೌಕರ್ಯ, ನುರಿತ ಅಧ್ಯಾಪಕ ವರ್ಗ, ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಪರಸ್ಪರ ಹೊಂದಾಣಿಕೆಯಿಂದ ಮುಂದುವರಿದರೆ ಶಾಲೆಯನ್ನು ಮಾದರಿಯನ್ನಾಗಿ ರೂಪಿಸುವುದು ಕಷ್ಟಸಾಧ್ಯವಲ್ಲ ಎಂದು ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ ಹೇಳಿದರು.
ಅವರು ಶುಕ್ರವಾರ ಜರುಗಿದ ತಗ್ಗರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಅನಾವರಣಕ್ಕೆ ವಾರ್ಷಿಕೋತ್ಸವ ಉತ್ತಮ ವೇದಿಕೆ. ಶಾಲಾ ವಾರ್ಷಿಕೋತ್ಸವ ಎಂದರೆ ಊರಿನವರಿಗೊಂದು ಹಬ್ಬದ ವಾತಾವರಣ ಎಂದರು.
ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯ ಬಾಬು ಶೆಟ್ಟಿ ತಗ್ಗರ್ಸೆ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಸದಸ್ಯೆ ಮಾಲಿನಿ ಕೆ., ಬೈಂದೂರು ಗ್ರಾಮ ಪಂಚಾಯತ್ ಸದಸ್ಯೆ ಭಾಗೀರಥಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೈಂದೂರು ವಲಯ ಅಧ್ಯಕ್ಷ ವಿಶ್ವನಾಥ ಪೂಜಾರಿ, ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್‌ಕುಮಾರ್ ಶೆಟ್ಟಿ, ತಗ್ಗರ್ಸೆ ಮಹಾಸತಿ ಫ್ರೆಂಡ್ಸ್ ಅಧ್ಯಕ್ಷ ಸತೀಶ್ ಜಿ., ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ವೆಂಕಟರಮಣ ದೇವಾಡಿಗ, ಅಧ್ಯಕ್ಷ ವಸಂತ ಬಿ. ಮೊಗವೀರ, ಉದ್ಯಮಿಗಳಾದ ದಿನಕರ ಶೆಟ್ಟಿ, ಮಂಜುನಾಥ ಗಾಣಿಗ ಹುಳುವಾಡಿ, ಎಸ್‌ಡಿಎಂಸಿ ಅಧ್ಯಕ್ಷ ಪ್ರಭಾಕರ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.
ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರನ್ನು ಸನ್ಮಾನಿಸಲಾಯಿತು, ಯಕ್ಷಗಾನ ತರಬೇತುದಾರರಾದ ಪ್ರಶಾಂತ ಮಯ್ಯ ದಾರಿಮಕ್ಕಿ ಅವರನ್ನು ಗೌರವಿಸಲಾಯಿತು. ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ, ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಶಾಲಾ ಮುಖ್ಯೋಪಧ್ಯಾಯರಾದ ತಿಮ್ಮಪ್ಪ ಗಾಣಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಶಿಕ್ಷಕಿ ಜ್ಯೋತಿ ಶ್ರೀಧರ್ ಸ್ವಾಗತಿಸಿ, ಪ್ರೌಢಶಾಲಾ ಸಹಶಿಕ್ಷಕಿ ಸಂಗೀತಾ ಕುಮಾರಿ ವಂದಿಸಿದರು. ಹಿರಿಯ ಪ್ರಾಥಮಿಕ ವಿಭಾಗದ ಆಂಗ್ಲಭಾಷಾ ಪದವೀಧರ ಶಿಕ್ಷಕಿ ಸಾರಿಕಾ ಕಾರ್ಯಕ್ರಮ ನಿರೂಪಿಸಿದರು. ಹಳೆವಿದ್ಯಾರ್ಥೀ ಸಂಘದ ಗಣೇಶ್ ಪೂಜಾರಿ ಬಹುಮಾನಿತರ ಪಟ್ಟಿ ವಾಚಿಸಿದರು. ಶಿಕ್ಷಕಿಯರಾದ ಅಂಬಾಬಾಯಿ, ಮಾಲತಿ ಶಿರೂರು, ಗೌರವ ಶಿಕ್ಷಕಿ ಪುಪ್ಪಲತಾ ಸಹಕರಿಸಿದರು.