ಕುಂದಾಪ್ರ ಡಾಟ್ ಕಾಂ ಸುದ್ದಿ.
ಮಂಕಿ: ಇಲ್ಲಿನ ಕೊಕ್ಕೇಶ್ವರ ದೇವಸ್ಥಾನ ಎದುರಿನ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಮಕ್ಷತ್ರಿಯರ ಬೃಹತ್ ಸಮಾವೇಶಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಹಲವು ಹೆಸರುಗಳಿರುವ ಸಮುದಾಯವನ್ನು ಹಿಂದೂ ಕ್ಷತ್ರಿಯ ಎಂದೂ ಕರೆಯಲಾಗುತ್ತದೆ. ರಾಜ್ಯ ಸರ್ಕಾರದ ಇತರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಜಾತಿಯ ಹೆಸರು ಸೇರಿದೆ. ಆದರೆ, ಕೇಂದ್ರ ಸರ್ಕಾರದ ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ವಿಚಾರ ಗಮನಕ್ಕೆ ಬಂದಿದೆ. ಕೇಂದ್ರದ ಪಟ್ಟಿಯಲ್ಲಿ ಇದನ್ನು ಸರಿಪಡಿಸಲು ರಾಜ್ಯ ಸರಕಾರದಿಂದ ಪ್ರಯತ್ನಿಸಲಾಗುವುದು ಎಂದರು.
ಸಮುದಾಯದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಯುವಕರು ಅಗತ್ಯವಾದ ಕೌಶಲ್ಯ ತರಬೇತಿ ಪಡೆಯುವುದು ಅವಶ್ಯವಾಗಿದೆ. ಹೆಣ್ಣು ಮಕ್ಕಳು ಹಿಂದೆ ಉಳಿಯದೇ ಶಿಕ್ಷಣವನ್ನು ಪಡೆದುಕೊಳ್ಳುವುದು ಕೂಡ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರಕಾರ ನಿಮ್ಮ ನೆರವಿಗೆ ಬರಲಿದೆ ಎಂದರು.
ಮುಂದುವರಿದು ಮಾತನಾಡಿ ರಾಮಕ್ಷತ್ರಿಯ ಸಮಾಜದ ಕೊಕ್ಕೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಒಂದು ಕೋಟಿ ರೂ. ಬಿಡುಗಡೆಗೊಳಿಸುವ ಭರವಸೆ ನೀಡಿದರು. ಮಂಕಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಏತ ನೀರಾವರಿ ಯೋಜನೆಯನ್ನು ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದರು.
ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಆರ್ಶೀರ್ವಚನ ನೀಡಿ ಸಮಾವೇಶದ ಮೂಲಕ ರಾಮಕ್ಷತ್ರಿಯ ಸಮಾಜದ ಶಕ್ತಿಯ ಅರಿವಾಗಿದೆ. ಸಮುದಾಯ ಅಭಿವೃದ್ಧಿ ಹೊಂದಲು ಸಂಘಟನೆ ಅತ್ಯಗತ್ಯ. ಒಗ್ಗಟ್ಟಾಗಿದ್ದಾಗಲೇ ಎಲ್ಲವನ್ನೂ ಎದುರಿಸಲು ಸಾಧ್ಯವಾಗುತ್ತದೆ ಎಂದ ಅವರು, ಸಮುದಾಯದ ಚಿಂತನೆಯ ಜೊತೆಗೆ ಲೋಕಕಲ್ಯಾಣದ ಚಿಂತನೆಯನ್ನೂ ಎಲ್ಲರೂ ಮಾಡಬೇಕಿದೆ ಎಂದರು.
‘ಭಟ್ಕಳ, ಹೊನ್ನಾವರ, ಶಿರಸಿ ಮುಂತಾದ ತಾಲ್ಲೂಕುಗಳನ್ನು ಶರಾವತಿ ಅಭಯಾರಣ್ಯಕ್ಕೆ ಸೇರಿಸುವ ನಿರ್ಣಯ ಈಗಾಗಲೇ ಆಗಿದೆ. ಇದನ್ನು ವಾಪಸ್ ಮಾಡದಿದ್ದರೆ ಬಹಳ ಕಷ್ಟವಾಗುತ್ತದೆ. ಇಲ್ಲಿನ ಜನರು ಸಣ್ಣ ಸಣ್ಣದಕ್ಕೂ ದೂರದೂರಿಗೆ ಅಲೆದಾಡಬೇಕಾಗುತ್ತದೆ. ಆದ್ದರಿಂದ ಆದಷ್ಟು ಬೇಗ ಈ ನಿರ್ಣಯವನ್ನು ಕೈ ಬಿಡಬೇಕು’ ಎಂದು ಆಗ್ರಹಿಸಿದರು.
ಕರ್ನಾಟಕ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಅನಂತಕುಮಾರ್ ಹೆಗ್ಡೆ, ಶಾಸಕರಾದ ಸುನೀಲ್ ನಾಯ್ಕ್, ದಿನಕರ ಶೆಟ್ಟಿ, ಮಾಜಿ ಶಾಸಕ ಕೃಷ್ಣ ಪಾಲೇಮಾರ್ ಮಾತನಾಡಿದರು. ಶಾಸಕಿ ರೂಪಾಲಿ ನಾಯ್ಕ್, ಜೈವಿಕ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ವೈದ್ಯರಾದ ಎಚ್. ವಿ. ದೀಪಕ್ ರಾವ್, ಡಾ. ಪ್ರಸಾದ್, ಹೊನ್ನಾವರ ತಾಪಂ ಅಧ್ಯಕ್ಷ ಉಲ್ಲಾಸ್ ಈಶ್ವರ ನಾಯ್ಕ್, ಮಾಜಿ ಜಿಪಂ ಉಪಾಧ್ಯಕ್ಷೆ ವನಿತಾ ಅಣ್ಣಪ್ಪ ನಾಯ್ಕ್, ಮಂಕಿ ಗ್ರಾಪಂ ಅಧ್ಯಕ್ಷ ಸತೀಶ್ ಎ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರದ ರಾಮಕ್ಷತ್ರಿಯ ಸಮಾಜದ ಸಾಧಕರಿಗೆ ಸನ್ಮಾನಿಸಲಾಯಿತು. ದೇಶಸೇವೆಯಲ್ಲಿ ತೊಡಗಿರುವ ರಾಮಕ್ಷತ್ರಿಯ ಸಮಾಜದ ಸೈನಿಕರುಗಳನ್ನು ಗೌರವಿಸಲಾಯಿತು. ಸ್ಪೀಕರ್ ವಿಶ್ವೇಶ್ವರ ಹೆಗ್ಡೆ ಕಾಗೇರಿ ರಾಮಕ್ಷತ್ರಿಯ ವಿಜಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಸ್ಮರಣ ಸಂಚಿಕೆ ಪ್ರಧಾನ ಸಂಪಾದಕ ಎಸ್.ಜಿ ನಾಯ್ಕ್ ಪ್ರಾಸ್ತಾವಿಕ ಮಾತನಾಡಿದರು. ಸಮಾಜದ ವತಿಯಿಂದ ಮುಖ್ಯಮಂತ್ರಿಗಳಿಗೆ ಬಿಲ್ಲು ಬಾಣ, ಶ್ರೀರಾಮಚಂದ್ರರ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿವಿಧ ಬೇಡಿಕೆಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.
ವಿಶ್ವ ರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷ, ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಸಾಗತಿಸಿದರು. ರಾಮಕ್ಷತ್ರಿಯ ಬೃಹತ್ ಸಮಾವೇಶ ಸಮಿತಿ ಅಧ್ಯಕ್ಷ ಎಸ್.ಕೆ. ನಾಯ್ಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಆನಂದ ವಾಯ್ ನಾಯ್ಕ್ ಸನ್ಮಾನಿತರ ಪರಿಚಯ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ರವೀಂದ್ರ ಗಂಗೊಳ್ಳಿ ವಂದಿಸಿದರು. ಕಾರ್ಯದರ್ಶಿ ಗಣಪತಿ ಹೋಬಳಿದಾರ್, ಉ.ಕ ಜಿಲ್ಲಾ ರಾಮಕ್ಷತ್ರಿಯ ನೌಕರರ ಸಂಘದ ಅಧ್ಯಕ್ಷ ಉದಯ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.
ಸಮಾವೇಶದಲ್ಲಿ ಜನಸಾಗರ:
ಸಮಾವೇಶದಲ್ಲಿ ಉತ್ತರ ಕನ್ನಡ, ಉಡುಪಿ, ದಕ್ಷಿಣಕನ್ನಡ, ಶಿವಮೊಗ್ಗ, ಚಿಕ್ಕಮಂಗಳೂರು, ಧಾರವಾಡ, ಕೇರಳ, ಗೋವಾ, ಮುಂಬೈ ಸೇರಿದಂತೆ ವಿವಿಧೆಡೆಗಳಿಂದ ಸಾವಿರಾರು ಮಂದಿ ಆಗಮಿಸಿದ್ದರು. ಸುಮಾರು ೧೫,೦೦೦ದಷ್ಟು ಜನರು ಮೊದಲ ದಿನ ಭಾಗವಹಿಸಿದ್ದರು. ಎಲ್ಲರಿಗೂ ತಿಂಡಿ, ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಮಾವೇಶಕ್ಕಾಗಿ ವಿವಿಧ ಮಳಿಗೆಗಳನ್ನು ನಿರ್ಮಿಸಲಾಗಿದತ್ತು. ರಾಮತಾರಕ ಯಜ್ಞ ನಡೆಯುವ ಚಪ್ಪರದ ಎದುರು ಅಡಿಕೆಯ ಶಿವಲಿಂಗ, ಸಮ್ಮೇಳನದ ಕಾರ್ಯದರ್ಶಿ, ಶಿಕ್ಷಕ ಗಣಪತಿ ಹೋಬಳಿದಾರ್ ಅವರ ಪ್ರಾಚ್ಯ ವಸ್ತುಗಳ ಪ್ರದರ್ಶನ ಗಮನ ಸೆಳೆಯಿತು.




Videos















