ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಜ.5: ಮರಳು ತುಂಬಿಸಿಕೊಂಡು ಸಾಗುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಬೈಂದೂರು ರಾಷ್ಟ್ರೀಯ ಹೆದ್ದಾರಿ ಬದಿಯ ಡಾಬಾ/ಅಂಗಡಿಯೊಂದಕ್ಕೆ ನುಗ್ಗಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಘಟನೆಯಲ್ಲಿ ಬೈಂದೂರು ಹೊಸ ಬಸ್ ನಿಲ್ದಾಣದ ಎದುರು ಇರುವ ಅಂಗಡಿಗಳು ಜಖಂ ಆಗಿದ್ದು, ಅಲ್ಲಿದ್ದ ಜನರು ಪ್ರಾಣಾಪಾಯಿಂದ ಪಾರಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿ ವೇಗದಿಂದ ಭಟ್ಕಳ ಕಡೆಗೆ ಸಾಗುತ್ತಿದ್ದ ಲಾರಿಗೆ ಬೈಂದೂರು ರೈಲ್ವೆ ನಿಲ್ದಾಣ ರಸ್ತೆಯಿಂದ ಟಿಪ್ಪರ್ ಒಂದು ಎದುರು ಬಂದಿದ್ದರಿಂದ ಲಾರಿ ಚಾಲಕ ನಿಯಂತ್ರಣ ಕಳೆದುಕೊಂಡು ಎಡಭಾಗಕ್ಕೆ ಲಾರಿಯನ್ನು ನುಗ್ಗಿಸಿದ್ದಾನೆ. ಲಾರಿ ಹಾದಿ ತಪ್ಪಿರುವುದನ್ನು ಗಮನಿಸಿದ ಡಾಬಾ ಎದುರು ನಿಂತಿದ್ದ ಜನರು ತಪ್ಪಿಸಿಕೊಂಡಿದ್ದರಿಂದ ಲಾರಿ ಸೀದಾ ಡಾಬಾ ಒಳಕ್ಕೆ ನುಗ್ಗಿ ನಿಂತಿತು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಸ್ಥಳೀಯರು ಲಾರಿಯನ್ನು ಪರೀಕ್ಷಿಸಿದಾಗ ಅಕ್ರಮವಾಗಿ ಮರಳು ಸಾಗಿಸುತ್ತಿರುವುದು ಗಮನಕ್ಕೆ ಬಂದಿದೆ. ಅಲ್ಲೇ ಒಂದೇ ಲಾರಿಯಲ್ಲಿ ಮೂರು ನಂಬರ್ ಪ್ಲೇಟ್ ಇರುವುದು ಅಕ್ರಮ ಸಾಗಾಟವನ್ನು ದೃಢಪಡಿಸುವಂತಿದೆ. ಟೋಲ್‌ಗೇಟ್, ಚೆಕ್‌ಪೋಸ್ಟ್‌ಗಳಿರುವುದು ತಿಳಿದು ರಾಜಾರೋಷವಾಗಿ ಹಗಲು ಹೊತ್ತಿನಲ್ಲಿಯೇ ಅಕ್ರಮವಾಗಿ ಮರಳು ಸಾಗಿಸುತ್ತಿರುವುದರ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ.