ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗಂಗೊಳ್ಳಿಯ ಖಾರ್ವಿಕೇರಿ ಶ್ರೀ ಮಹಾಂಕಾಳಿ ಅಮ್ಮನವರಿಗೆ ನಕಲಿ ಆಭರಣ ತೊಡಿಸಿದ್ದ ಅರ್ಚಕನನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ. ಶಿರಸಿ ತಾಲೂಕಿನ ಸಾಲಕಣಿ ಗ್ರಾಮದ ಮೊರೆಗಾರದ ನರಸಿಂಹ ಭಟ್( 43) ಬಂಧಿತ ಆರೋಪಿ.
ದೇವಳದ ಆಡಳಿತ ಮಂಡಳಿ ಹಾಗೂ ಭಕ್ತರು ಜೊತೆಗೂಡಿ ಸೇವಾ ರೂಪದಲ್ಲಿ 21 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಸಮರ್ಪಿಸಿದ್ದು, ಮತ್ತು ಈ ಆಭರಣಗಳಿಂದ ನಿತ್ಯವೂ ದೇವರ ಅಲಂಕಾರ ನಡೆಸುತ್ತಾ ಬಂದಿದ್ದಾರೆ.
ದೇವಳದಲ್ಲಿ ನವರಾತ್ರಿ ಉತ್ಸವಕ್ಕೆ ಸಿದ್ಧತೆ ನಡೆಯುತ್ತಿದ್ದು, ಈ ಸಲುವಾಗಿ ಸೆಪ್ಟೆಂಬರ್ 21ರಂದು ಶುಚಿಗೊಳಿಸುವುದಕ್ಕಾಗಿ ದೇವರ ಆಭರಣಗಳನ್ನು ಅರ್ಚಕರಿಂದ ಪಡೆಯಲಾಯಿತು.
ಈ ಸಂದರ್ಭ ಆಭರಣಗಳನ್ನು ಪರೀಕ್ಷಿಸಿದಾಗ ನಕಲಿ ಚಿನ್ನಾಭರಣ ಎಂಬುದಾಗಿ ಬೆಳಕಿಗೆ ಬಂದಿದೆ. ವಿಚಾರಣೆ ನಡೆಸಿದಾಗ ಆಭರಣಗಳನ್ನು ತಾನು ತೆಗೆದಿರುವುದಾಗಿ ಅರ್ಚಕರು ಒಪ್ಪಿಕೊಂಡಿದ್ದಾರೆ.
ಆಡಳಿತ ಮಂಡಳಿ ಮತ್ತು ಭಕ್ತರಿಗೆ ಸಂಶಯ ಬಾರದೆಂಬ ಉದ್ದೇಶದಿಂದ ನಕಲಿ ಚಿನ್ನಾಭರಣಗಳನ್ನು ದೇವರ ಮೂರ್ತಿಯ ಮೇಲೆ ಅಲಂಕರಿಸಿದ್ದಾನೆ. ಬಳಿಕ ಕದ್ದ ಆಭರಣಗಳನ್ನು ಸ್ವಂಯ ಉಪಯೋಗಕ್ಕಾಗಿ ವಿವಿಧ ಬ್ಯಾಂಕುಗಳಲ್ಲಿ ಅಡವು ಇಟ್ಟಿದ್ದಾನೆ ಎಂದು ತಿಳಿದುಬಂದಿದೆ. ಗಂಗೊಳ್ಳಿ ಪಿಎಸ್ಐ ಹರೀಶ್ ಆರ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.