ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವವರು ಕೀಳರಿಮೆ ಹೊಂದಬೇಕಾಗಿಲ್ಲ. ಅಲ್ಲಿ ಓದಿದ ಅದೆಷ್ಟೋ ಮಂದಿ ದೊಡ್ಡ ಸಾಧನೆ ಮಾಡಿದ್ದಾರೆ ಎನ್ನುವುದಕ್ಕೆ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಐ.ಪಿ.ಎಸ್ ಅಧಿಕಾರಿಯಾಗಿರುವ ನಾನು ಉದಾಹರಣೆ ಎಂದು ಕುಂದಾಪುರ ಎಎಸ್‌ಪಿ ಹರಿರಾಮ್ ಶಂಕರ್ ಹೇಳಿದರು.
ಈಚೆಗೆ ನಡೆದ ಉಪ್ಪುಂದ ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದ ಎರಡನೆಯ ದಿನದ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.
ವಿದ್ಯಾರ್ಥಿಗಳು ಸಾಧನೆಯ ಆಕಾಂಕ್ಷೆ ಇರಿಸಿಕೊಂಡು ಅಧ್ಯಯನ ನಡೆಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಬೇಕು. ಅಂತವರಿಗೆ ಅವಕಾಶದ ಹಲವು ಬಾಗಿಲುಗಳು ತೆರೆದುಕೊಳ್ಳುತ್ತವೆ. ರಾಷ್ಟ್ರ ಮತ್ತು ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದೂ ಅವುಗಳಲ್ಲಿ ಒಂದು ಎಂದು ಅವರು ಹೇಳಿದರು.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಯ ಗಣಪತಿ ಎಸ್. ಭಟ್ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಎಂ. ರಾಜಶೇಖರ ಹೆಬ್ಬಾರ್ ಸಂಸ್ಥೆಯ ಈ ವರೆಗಿನ ಪ್ರಗತಿಯನ್ನು ವಿವರಿಸಿ, ಮುಂದಿನ ದಿನಗಳಲ್ಲಿ ಅದನ್ನು ಮಾದರಿ ಶಾಲೆಯಾಗಿ ರೂಪಿಸುವುದಾಗಿ ತಿಳಿಸಿದರು. ಅತಿಥಿಯಾಗಿದ್ದ ಉಡುಪಿ ಚೇಂಬರ್ ಆಫ್ ಕಾಮರ್ಸ್‌ನ ಉಪಾಧ್ಯಕ್ಷ ಎಂ. ನಾಗರಾಜ ಹೆಬ್ಬಾರ್ ಶುಭ ಹಾರೈಸಿದರು. ಸಂಸ್ಥೆಯ ಕಾರ್ಯದರ್ಶಿ ಎಂ. ಪೃಥ್ವಿರಾಜ್ ಹೆಬ್ಬಾರ್, ಸಹ ಕಾರ್ಯದರ್ಶಿ ಪಲ್ಲವಿ ಹೆಬ್ಬಾರ್, ಟ್ರಸ್ಟಿಗಳಾದ ಉಷಾ ಹೆಬ್ಬಾರ್, ಪ್ರಣಮ್‌ರಾಜ್ ಹೆಬ್ಬಾರ್, ಶಾಲಾ ಸಂಚಾಲಕ ಎಚ್. ಎಸ್. ಕಿಶೋರ್ ಕುಮಾರ್, ಸಹಾಯಕ ಮುಖ್ಯೋಪಾಧ್ಯಾಯಿನಿ ರಂಜಿತಾ ಹೆಗ್ಡೆ, ವಿದ್ಯಾರ್ಥಿ ನಾಯಕ ನಾಗಭೂಷಣ ಇದ್ದರು. ಆಶಾವೀಣಾ ಡಾಯಸ್ ನಿರೂಪಿಸಿದರು. ವಿದ್ಯಾರ್ಥಿಗಳು ನೃತ್ಯ, ನಾಟಕ, ಯಕ್ಷಗಾನ ಪ್ರದರ್ಶನ ನೀಡಿದರು. ಕೆ. ಗೋಪಾಲ ಪೂಜಾರಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಮೊದಲ ದಿನ ರಾಜಶೇಖರ ಹೆಬ್ಬಾರ್ ಅಧ್ಯಕ್ಷತೆಯಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಜನಾರ್ದನ ಉದ್ಘಾಟಿಸಿದರು. ಅಂದು ಪುರಸ್ಕಾರ ವಿತರಣೆಯ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದುವು.