ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಂಘ ಸಂಸ್ಥೆಗಳು ಸೇವೆ, ಸಂಸ್ಕೃತಿ, ನೈತಿಕ ಮೌಲ್ಯಗಳನ್ನು ಕಲಿಸುವ ಕೇಂದ್ರಗಳಾಗುವ ಜತೆಗೆ ಮಾನವೀಯತೆಯನ್ನು ಮೂಲ ಸೆಲೆಯನ್ನಾಗಿಸಿ ಕಾರ್ಯವೆಸಗುವುದು ಅತ್ಯವಶ್ಯ ಎಂದು ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಹೆಚ್. ವಸಂತ ಹೆಗ್ಡೆ ಹೇಳಿದರು.
ಅವರು ಮಂಗಳವಾರ ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ಬೈಂದೂರು ಸಂಸ್ಥೆಯು ವಿಂಶತಿ ಸಂಭ್ರಮದೊಂದಿಗೆ ಆಯೋಜಿಸಲಾಗಿದ ಮೂರು ದಿನಗಳ ಸುರಭಿ ಜೈಸಿರಿ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿ ಸಮಾಜವನ್ನು ಸದೃಢವಾಗಿ ಕಟ್ಟಿ ಬೆಳೆಸುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಹಿರಿಯಾಗಿದ್ದು, ಈ ನೆಲೆಯಲ್ಲಿ ಎಲ್ಲಾ ಸಂಸ್ಥೆಗಳು ಎಚ್ಚರಿಕೆಯಿಂದ ತೊಡಗಿಸಿಕೊಳ್ಳಬೇಕಾದ ಅವಶ್ಯಕತೆಯಿದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಕೆ. ಬಾಬು ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಯಡ್ತರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಶ್ರೀ ಸೇನೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಚನ್ನಕೇಶವ ಉಪಾಧ್ಯಾಯ, ಸುರಭಿ ಅಧ್ಯಕ್ಷ ಸತ್ಯನಾ ಕೊಡೇರಿ, ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಉಪ್ಪುಂದ, ಸಲಹೆಗಾರ ಜಿ. ತಿಮ್ಮಪ್ಪಯ್ಯ ಮಯ್ಯಾಡಿ ಉಪಸ್ಥಿತರಿದ್ದರು.
ಈ ಸಂದರ್ಭ ಹಿರಿಯ ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಸುರಭಿ ಸಂಸ್ಥೆಯ ಸಂಗೀತ ಗುರು ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ, ಚಿತ್ರಕಲಾ ಶಿಕ್ಷಕ ಗಿರೀಶ್ ಗಾಣಿಗ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಸುರಭಿ ಸಂಸ್ಥೆಯ ಪೋಷಕರಿಗಾಗಿ ಆಯೋಜಿಸಲಾದ ಸ್ವರ್ಧೆಗಳ ವಿಜೇತರಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸುರಭಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸಂಸ್ಥೆಯ ಉಪಾಧ್ಯಕ್ಷ ಆನಂದ ಮದ್ದೋಡಿ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ ವೈ. ಕೊರಗ ವಂದಿಸಿದರು. ಜೊತೆ ಕಾರ್ಯದರ್ಶಿ ರಾಘವೇಂದ್ರ ಕೆ. ಬೈಂದೂರು ಕಾರ್ಯಕ್ರಮ ನಿರೂಪಿಸಿದರು.