ಕುಂದಾಪ್ರ ಡಾಟ್ ಕಾಂ ಸುದ್ದಿ
ಮೂಡುಬಿದಿರೆ: ಜೈವಿಕ ತಂತ್ರಜ್ಞಾನ ಮಾನವನ ವಿಕಾಸಕ್ಕೆ ಮಾತ್ರವಲ್ಲದೆ ಪ್ರಾಣಿ, ಸಸ್ಯ ಮತ್ತು ಪರಿಸರದ ಏಳಿಗೆಗಾಗಿ ಹುಟ್ಟಿಕೊಂಡಿದ್ದಾಗಿದೆ ಎಂದು ಹಾಸನದ ಕರ್ನಾಟಕ ಪಶುವೈದ್ಯ ಮತ್ತು ಪ್ರಾಣಿವಿಜ್ಞಾನ ವಿಶ್ವವಿದ್ಯಾಲಯದ ಅಸಿಸ್ಟೆಂಟ್ ಪ್ರೋಫೆಸರ್ ಡಾ. ಗೀರೀಶ್ ಬಿ. ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಆಳ್ವಾಸ್ ಕಾಲೇಜಿನಲ್ಲಿ ಜೈವಿಕ ತಂತ್ರಜ್ಞಾನ ವಿಭಾಗ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ವಿಭಾಗದ ಹಳೆ ವಿದ್ಯಾರ್ಥಿಗಳ ಪ್ರಾಯೋಜಿತ ಒಂದು ದಿನದ ರಾಷ್ಟ್ರಮಟ್ಟದ ವಿಚಾರಗೋಷ್ಠಿ ’ಕರೆಂಟ್ ಅಡ್ವಾನ್ಸ್‌ಸ್ ಇನ್ ಮೆಡಿಕಲ್ ಆಂಡ್ ಇಂಡಷ್ಟ್ರಿಯಲ್ ಬಯೋಟೆಕ್ನಾಲಜಿ’ ನ್ನು ಉದ್ಘಾಟಿಸಿ ಮಾತನಾಡಿದರು.
ಜೀವನದ ಸುಧಾರಣೆ ಎಂದಾಗ ಕೇವಲ ಮನುಷ್ಯನ ಜೀವನ ಸುಧಾರಣೆಗೆ ಸೀಮಿತವಾಗಿರದೆ ಪ್ರಾಣಿ, ಪಕ್ಷಿ, ಸಸ್ಯ ಮತ್ತು ಪರಿಸರದ ಸುಧಾರಣೆಯ ಅಂಶಗಳನ್ನು ಒಬ್ಬ ಜೈವಿಕ ತಂತ್ರಜ್ಞಾನಿ ಗಣನೆಗೆ ತೆಗೆದುಕೊಳ್ಳಬೇಕು ಎಂದರು.
ಪ್ರಸ್ತುತ ಕೊರೋನಾ ವೈರಸ್ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಮಾಡಿದೆ ಆದರೆ ಇದರೆ ಬಗ್ಗೆ ಜನರು ಚಿಂತೆಗೆ ಒಳಗಾಗಬೇಕಿಲ್ಲ ಏಕೆಂದರೆ ಹಿಂದೆಯು ಹಲವು ಮಾರಕ ರೋಗಗಳಿಗೆ ವಿಜ್ಞಾನಿಗಳು ಪರಿಹಾರ ನೀಡಿದ್ದಾರೆ. ಹಾಗೆಯೇ ಈ ರೋಗವನ್ನು ಎದುರಿಸಲು ವಿಜ್ಞಾನಿ ಸಮುದಾಯ ಸಿದ್ದವಾಗಿದೆ ಎಂದು ಭರವಸೆ ನೀಡಿದರು.
ವಿಜ್ಞಾನವು ಸಂಕೀರ್ಣತೆಯಿಂದ ಕೂಡಿದ್ದರೂ ವಿಜ್ಞಾನಿಗಳು ಹಾಗೂ ಉಪಪನ್ಯಾಸಕರು ಸರಳವಾಗಿ ವಿವರಿಸುವುದರಿಂದ ಜನಸಾಮಾನ್ಯರಿಗೆ ಮುಟ್ಟಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೆಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ಕೇವಲ ಕಾರ್ಯಕ್ರಮಗಳನ್ನು ಮಾಡುವುದರಿಂದ ಯಾವ ಪ್ರಯೋಜನವು ಆಗುವುದಿಲ್ಲ. ಕಾರ್ಯಕ್ರಮದಿಂದ ವಿದ್ಯಾರ್ಥಿಗಳು ಉತ್ತೇಜನ ಪಡೆದು ತಮ್ಮನ್ನು ತಾವು ಬೆಳೆಸಿಕೊಂಡು, ತಾವು ಓದುವ ಕಾಲೇಜಿನಲ್ಲಿ ಅಂತಹ ವಾತಾವರಣವನ್ನು ನಿರ್ಮಿಸುವುದರಿಂ ಕಾರ‍್ಯಕ್ರಮದ ಸಾರ್ಥಕತೆ ನಿಂತಿದೆ ಎಂದರು.
ಪ್ರಸ್ತುತ ವಿದ್ಯಾರ್ಥಿಗಳು ವಿದೇಶಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಇದಕ್ಕೆ ಭಾರತದಲ್ಲಿರುವ ಸಂಶೋಧನಾ ಪ್ರವೃತ್ತಿಯ ಕೊರತೆಯೆ ಮೂಲ ಕಾರಣ ಆದ್ದರಿಂದ ವಿದ್ಯಾರ್ಥಿಗಳು ಸಂಶೋಧನಾ ಮನಸ್ಥಿತಿಯನ್ನು ಹೊಂದಬೇಕು ಎಂದು ಕಿವಿಮಾತು ಹೇಳಿದರು. ಇತಿಹಾಸದ ಕುರಿತು ಮಾತನಾಡದೆ ಇತಿಹಾಸ ಸೃಷ್ಟಿಸುವ ಶಕ್ತಿ ಇದ್ದು ಅದರ ಕುರಿತು ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದರು.
ಕಾರ‍್ಯಕ್ರಮದಲ್ಲಿ ಮಂಗಳೂರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಕೆ. ಕೀರ್ತಿಕುಮಾರ್ ಮತ್ತು ಕೆಎಸ್‌ಪಿಸಿಬಿಯ ನಿವೃತ್ತ ಹಿರಿಯ ವಿಜ್ಞಾನಿ ಎಸ್. ಜಯಪ್ರಕಾಶ್ ನಾಯಕ್ ಉಪಸ್ಥಿತರಿದ್ದರು.
ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ರಾಮ ಭಟ್ ಸ್ವಾಗತಿಸಿದರು. ವಿದ್ಯಾರ್ಥಿ ಅಕ್ಷಯ್ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು.