ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ : ಗಂಗೊಳ್ಳಿ ಶ್ರೀ ಇಂದುಧರ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ೭೫ನೇ ಮಹೋತ್ಸವದ ಪ್ರಯುಕ್ತ ಆಹ್ವಾನಿತ ಶಾಲಾ ಬಾಲಕ-ಬಾಲಕಿಯರ ತಂಡಗಳ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ ಹಾಗೂ ಧಾರ್ಮಿಕ ಸಭೆ ಗಂಗೊಳ್ಳಿ ಶ್ರೀ ಇಂದುಧರ ದೇವಸ್ಥಾನದ ಸಭಾಂಗಣದಲ್ಲಿ ಶುಕ್ರವಾರ ಜರಗಿತು.
ಭಜನಾ ಸ್ಪರ್ಧೆ ಹಾಗೂ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದ ಗಂಗೊಳ್ಳಿಯ ಉದ್ಯಮಿ ಎಚ್.ಗಣೇಶ ಕಾಮತ್, ಭಜನೆಯಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಅಲ್ಲದೆ ಪರಿಸರದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಪರಿಶುದ್ಧ ಮನಸ್ಸಿನಿಂದ ಭಜನೆ ಮಾಡಿದರೆ ಆಧ್ಯಾತ್ಮಿಕ ಚೈತನ್ಯ ಜಾಗೃತವಾಗಿ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಕಳೆದ ೭೫ ವರ್ಷಗಳಿಂದ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾ, ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸುತ್ತಿರುವ ಶ್ರೀ ಇಂದುಧರ ದೇವಸ್ಥಾನದ ಕೆಲಸ ಶ್ಲಾಘನೀಯ ಎಂದರು.
ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸದ್ದರು. ಮುಖ್ಯ ಅತಿಥಿಯಾಗಿದ್ದ ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಶಿವಾನಂದ ಪೂಜಾರಿ ಶುಭ ಹಾರೈಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ಬಿ.ರಾಘವೇಂದ್ರ ಪೈ, ಬಿ.ಗಣೇಶ ಶೆಣೈ, ಮತ್ಸ್ಯೋದ್ಯಮಿ ಮಂಜುನಾಥ ಜಿ.ಟಿ., ಜಿ.ಪುರುಷೋತ್ತಮ ಆರ್ಕಾಟಿ, ಉಮಾನಾಥ ದೇವಾಡಿಗ, ಗಿರೀಶ ಖಾರ್ವಿ ದಾಕುಹಿತ್ಲು, ಜಗದೀಶ ನಾಯಕವಾಡಿ, ಜಗದೀಶ ಮೇಲ್‌ಗಂಗೊಳ್ಳಿ, ವಿಶಾಲಾಕ್ಷಿ, ದೇವಸ್ಥಾನದ ಉಪಾಧ್ಯಕ್ಷ ಸುರೇಶ ಜಿ. ಮತ್ತಿತರರು ಉಪಸ್ಥಿತರಿದ್ದರು.
ದೇವಸ್ಥಾನದ ಅಧ್ಯಕ್ಷ ಸುಂದರ ಜಿ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶ್ರೀನಿವಾಸ ವಂದಿಸಿದರು.