ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸನಾತನ ಹಿಂದೂ ಧರ್ಮದ ಪ್ರತಿಯೊಂದು ಧಾರ್ಮಿಕ ಆಚರಣೆಗಳು ವೈಜ್ಞಾನಿಕವಾಗಿಯೂ ಸಂಬಂಧ ಹೊಂದಿದೆ. ಭಜನೆಯಲ್ಲಿ ಮೂಲಾಧಾರಚಕ್ರ, ಸ್ವಾಧಿಷ್ಠಾನಚಕ್ರ ಮಣಿಪುರಚಕ್ರ ಹಾಗೂ ಸಹಸ್ರಾಳಚಕ್ರ ಎಂಬ ವಿಧಗಳಿವೆ. ಹೀಗಾಗಿ ನಾವು ಮಾಡುವ ಪ್ರತಿಯೊಂದು ಧಾರ್ಮಿಕ ಪದ್ದತಿಗಳು ಗಣಪತಿ ಸ್ತುತಿಯೊಂದಿಗೆ ಆರಂಭಗೊಳ್ಳಲಿದ್ದು, ಇದು ಶಾಸ್ತ್ರದ ನಿಯಮವಾಗಿದೆ ಎಂದು ವೇ. ಮೂ. ಹಳಗೇರಿ ವಾಸುದೇವ ಕಾರಂತ ಹೇಳಿದರು.

ಹೇರಂಜಾಲು ಶ್ರೀ ಗುಡೇ ಮಹಾಲಿಂಗೇಶ್ವರ ಭಜನಾ ಮಂಡಳಿಯ ವತಿಯಿಂದ ನಡೆದ ಮಹಾಶಿವರಾತ್ರಿ ಅಖಂಡ ಭಜನಾ ಸಪ್ತಾಹದ ಮಂಗಲೋತ್ಸವದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಧ್ಯಾನಮಾರ್ಗ, ಭಕ್ತಿಮಾರ್ಗ ಮತ್ತು ಕರ್ಮಮಾರ್ಗಗಳಿಂದ ಮಾತ್ರ ನಮ್ಮ ಆಂತರಿಕ ಕೊಳೆಯನ್ನು ತೊಳೆದುಕೊಳ್ಳಬಹುದು. ಭಕ್ತಿ ಮಾರ್ಗ ಅಂದರೆ ಭಜನೆಯ ಮೂಲಕ ಶೀಘ್ರ ಭಗವಂತನ ಒಲುಮೆ ಸಾಧ್ಯವಾಗುತ್ತದೆ. ಬ್ರಾಹ್ಮಿ ಹಾಗೂ ಗೋದೂಳಿ ಸಮಯದಲ್ಲಿ ದೇವರ ಸ್ಮರಣೆ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಇದಕ್ಕೆ ಮೂಲವಾಗಿರುವ ವಿಧಾನವೇ ಭಜನೆ. ಇದು ತಪಸ್ಸಿಗೆ ಸಮನಾಗಿರುವುದಲ್ಲದೇ ಭಗವಂತನ ಅನುಗ್ರಹಕ್ಕೆ ಪಾತ್ರರಾಗಿ ಶೀಘ್ರವಾಗಿ ಆತನನ್ನು ಒಲಿಸಿಕೊಳ್ಳುವ ಸುಲಭದ ದಾರಿಯಾಗಿದೆ. ಅಲ್ಲದೇ ಆತ್ಮೋದ್ಧಾರಕ್ಕೆ ಕೂಡಾ ಭಜನೆ ಅತ್ಯವಶ್ಯಕ ಎಂದರು.

ಹೆರಂಜಾಲು ಶ್ರೀ ಗುಡೇಮಹಾಲಿಂಗೇಶ್ವರ ದೇವಸ್ಥಾನ ಧರ್ಮದರ್ಶಿ ಹೆಚ್. ಪದ್ಮನಾಭ ಮೇರ್ಟ ಅಧ್ಯಕ್ಷತೆವಹಿಸಿದ್ದರು. ಹಿರಿಯ ಭಜನಾ ಸಾಧಕರಾದ ಗೋವಿಂದ ದೇವಾಡಿಗ, ಮಹಾಲಿಂಗ ಭಟ್ಟ, ಪದ್ಮನಾಭ ಹೆಬ್ಬಾರ್, ಹೆರಿಯ ದೇವಾಡಿಗ, ವೆಂಕ್ಟ ದೇವಾಡಿಗ, ಶೀನ ದೇವಾಡಿಗ, ದಾರ ದೇವಾಡಿಗ ಇವರನ್ನು ಸನ್ಮಾನಿಸಲಾಯಿತು.
ಜಿಪಂ ಸದಸ್ಯೆ ಗೌರಿ ದೇವಾಡಿಗ, ಕಂಬದಕೋಣೆ ಗ್ರಾಪಂ ಅಧ್ಯಕ್ಷ ಆನಂದ ಪೂಜಾರಿ, ಕಾಲ್ತೋಡು ಗ್ರಾಪಂ ಅಧ್ಯಕ್ಷ ಬಿ. ಅಣ್ಣಪ್ಪ ಶೆಟ್ಟಿ ಬಟ್ನಾಡಿ, ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಬಿ.ಸಿ. ಟ್ರಸ್ಟ್ ಜಿಲ್ಲಾ ನಿರ್ದೇಶಕ ಗಣೇಶ ಬಿ., ಕಾಲ್ತೋಡು ಶ್ರೀಮಾಲಸಾ ಮಾರಿಕಾಂಬಾ ದೇವಸ್ಥಾನದ ರಾಮಯ್ಯ ಅರ್ಚಕರು, ಕಿರಿಮಂಜೇಶ್ವರ ಶ್ರೀ ಅಗಸ್ತ್ಯೇಶ್ವರ ದೇವಸ್ಥಾನದ ಮಾಜಿ ಧರ್ಮದರ್ಶಿ ಕೆ. ಉಮೇಶ ಶ್ಯಾನಭೋಗ, ಭಜನಾ ಮಂಡಳಿ ಕಾರ್ಯದರ್ಶಿ ನಾಗೇಶ ದೇವಾಡಿಗ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ ಅಧ್ಯಕ್ಷೆ ಸುಮತಿ ಪಿ. ಮೇರ್ಟ, ಶ್ರೀನಿವಾಸ ಜೋಯಿಸ ಹೇರಂಜಾಲು, ಶ್ರೀ ಗುಡೇಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಮಂಜುನಾಥ ಅಡಿಗ, ಉದ್ಯಮಿ ಅಪ್ಪೆಡಿಮನೆ ಕೃಷ್ಣ ಪೂಜಾರಿ ಉಪಸ್ಥಿತರಿದ್ದರು. ನಾಗರಾಜ ಮೆರ್ಟ ಸ್ವಾಗತಿಸಿ, ಭಜನಾ ಮಂಡಳಿ ಅಧ್ಯಕ್ಷ ಶ್ರೀನಾಥ ಮೇರ್ಟ ಪ್ರಾಸ್ತಾವಿಸಿದರು. ವಿನಾಯಕ ಮೇರ್ಟ ನಿರೂಪಿಸಿದರು.
ಸಂಜೆ ಕ್ರೀಡಾ ವಿಜೇತರಿಗೆ ಬಹುಮಾನ ವಿತರಣೆ, ಗುಡೇದೇವಸ್ಥಾನ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಂತರ ವಿದ್ಯಾರ್ಥಿಗಳು ಮತ್ತು ಹಳೆವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ, ರಾತ್ರಿ ಕಲಾಸ್ಫೂರ್ತಿ ಹವ್ಯಾಸಿ ಕಲಾತಂಡ ಕುಂದಾಪುರ ಇವರಿಂದ ಹಾಸ್ಯಮಯ ನಗೆನಾಟಕ ಮನೆಒಕ್ಲು ಪ್ರದರ್ಶನಗೊಂಡಿತು.















