ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ : ನದಿ ಹಾಗೂ ಸಮುದ್ರದಲ್ಲಿ ತ್ಯಾಜ್ಯ, ಪ್ಲಾಸ್ಟಿಕ್ ಮತ್ತಿತರ ವಸ್ತುಗಳನ್ನು ಎಸೆಯಲಾಗುತ್ತಿದ್ದು ಇದರಿಂದ ಜಲಚರ ಜೀವಿಗಳಿಗೆ ಹಾನಿಯಾಗುತ್ತಿದೆ. ತ್ಯಾಜ್ಯಗಳನ್ನು ನದಿ, ಸಮುದ್ರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುವುದರಿಂದ ಆಗುವ ಅನಾಹುತಗಳು, ತೊಂದರೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಸ್ವಚ್ಛತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನ ನಡೆಸಬೇಕು ಎಂದು ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದೀಪ ಜಿ.ಎಸ್. ಹೇಳಿದರು.
ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆ, ಲಯನ್ಸ್ ಕ್ಲಬ್ ತ್ರಾಸಿ-ಗಂಗೊಳ್ಳಿ ಆಶ್ರಯದಲ್ಲಿ ಖಾರ್ವಿ ಆನ್‌ಲೈನ್ ಸಹಯೋಗದೊಂದಿಗೆ ಭಾನುವಾರ ಜರಗಿದ ತ್ರಾಸಿ ಬೀಚ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಕಾರ್ಯಕ್ರಮ ಯಶಸ್ವಿಯಾಗುತ್ತಿದ್ದು, ಎಲ್ಲರೂ ಸ್ವಯಂಪ್ರೇರಿತರಾಗಿ ತಮ್ಮ ಮನೆ ವಠಾರ, ಬೀದಿಯನ್ನು ಸ್ವಚ್ಛಗೊಳಿಸಿ ಸ್ವಚ್ಛ, ಸದೃಢ ದೇಶ ನಿರ್ಮಿಸಲು ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ನೇರಿ ಕಾರ್ನೆಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಲಯನ್ಸ್ ಕ್ಲಬ್‌ನ ರಿಜನ್ ಸೆಕ್ರೆಟರಿ ಜೋರ್ಜ್ ಡಿ ಅಲ್ಮೇಡಾ ಶುಭ ಹಾರೈಸಿದರು. ಇದೇ ಸಂದರ್ಭ ಖಾರ್ವಿ ಆನ್‌ಲೈನ್ ಸಂಸ್ಥೆಯ ಜನಜಾಗೃತಿ ಮೂಡಿಸುವ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು. ಖಾರ್ವಿ ಆನ್‌ಲೈನ್ ಸಂಸ್ಥೆಯ ಸುಧಾಕರ ಖಾರ್ವಿ, ಲಯನ್ಸ್ ಕ್ಲಬ್ ತ್ರಾಸಿ-ಗಂಗೊಳ್ಳಿಯ ಉಪಾಧ್ಯಕ್ಷ ಜಿ.ಮಹಮ್ಮದ್ ರಫೀಕ್, ಕಾರ್ಯದರ್ಶಿ ಕಿರಣ್ ಡಿಸೋಜ, ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಎಎಸ್ಸೈ ಆಗಸ್ಟಿನ್ ಕ್ವಾರ್ಡಸ್, ಭಾಸ್ಕರ ಮತ್ತಿತರರು ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ತ್ರಾಸಿ-ಗಂಗೊಳ್ಳಿ ಅಧ್ಯಕ್ಷ ಹರೀಶ ಖಾರ್ವಿ ಸ್ವಾಗತಿಸಿದರು. ಖಜಾಂಚಿ ಜೋಸೆಫ್ ಡಿಸೋಜ ವಂದಿಸಿದರು.
















