ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಾಂಸ್ಕೃತಿಕ ಪ್ರಜ್ಞೆ ದೇಶದ ಅಭಿವೃದ್ಧಿಗೆ ಪೂರಕವಾಗಿ, ಪ್ರೇರಕವಾಗಿ ಕೆಲಸಮಾಡುತ್ತದೆ. ಕಲೆ, ಚರಿತ್ರೆ, ಪಾರಂಪರಿಕ ಜ್ಞಾನ ಹಿರಿಯ ಬಳುವಳಿಯಾಗಿದ್ದು, ಇವೆಲ್ಲದರ ಜೊತೆಗೆ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಸಾಂಸ್ಕೃತಿಕ ಸಂಘಟನೆಗಳ ಪಾತ್ರ ದೊಡ್ಡದು ಎಂದು ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಾಂತಾನಂದ ಶೆಟ್ಟಿ ಹೇಳಿದರು.
ಅವರು ಪರಿಶಿಷ್ಟ ಪಂಗಡದ ರಂಗತಂಡ ಸಂಚಲನ ರಿ. ಹೊಸೂರು ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಭಾನುವಾರ ಹೊಸೂರಿನ ಕೆ.ವಿ ಸುಬ್ಬಣ್ಣ ವನರಂಗದಲ್ಲಿ ಆಯೋಜಿಸಲಾದ ಹನ್ನೆರಡನೇ ವರ್ಷದ ವಾರ್ಷಿಕ ಸಂಭ್ರಮ ವನಸಿರಿಯಲ್ಲೊಂದು ರಂಗಸುಗ್ಗಿ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿವೃತ್ತ ಯೋಧ ಸಂಜೀವ ನಾಯ್ಕ್ ಹುಲ್ಕಡಿಕೆ ಅವರನ್ನು ಸನ್ಮಾನಿಸಲಾಯಿತು.
ಯಡ್ತರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೂಕಾಂಬು ದೇವಾಡಿಗ ಅಧ್ಯಕ್ಷತೆ ವಹಿಸಿ ಮಾತನಾಡಿ ಯಾವುದೇ ಕೆಲಸವಿರಲಿ ಅದನ್ನು ಧೈರ್ಯವಾಗಿ ಮಾಡಿ. ಬದುಕಿನಲ್ಲಿ ಸಾಧನೆ ಮಾಡುತ್ತಾ ನಾವು ಬೆಳೆಯುವುದರ ಜೊತೆಗೆ ತಂದೆ ತಾಯಿಯರು ಹೆಮ್ಮೆ ಪಡುವಂತೆ ಮಾಡುವುದು ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ, ಮರಗಳ ತಪ್ಪಲಿನಲ್ಲಿ ಚಂದದ ಕಾರ್ಯಕ್ರಮ ಆಯೋಜಿಸಿರುವುದು
ಯಡ್ತರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಾಗರಾಜ ಶೆಟ್ಟಿ, ಬೈಂದೂರು ಜೆಸಿಐ ನಿಕಟಪೂರ್ವ ಅಧ್ಯಕ್ಷ ಮಣಿಕಂಠ ದೇವಾಡಿಗ, ಮುಲ್ಲಿಬಾರು ಶಾಲೆ ಎಸ್‌ಡಿಎಂಸಿ ಉಪಾಧ್ಯಕ್ಷೆ ಸಾವಿತ್ರಿ ವೆಂಕಟೇಶ್, ಉದ್ಯಮಿ ಮಹದೇವ ಪೂಜಾರಿ ಕಿಸ್ಮತಿ, ಪತ್ರಕರ್ತ ಗಿರೀಶ್ ಶಿರೂರು, ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಮಾಸ್ತಯ್ಯ ಪೂಜಾರಿ, ಮುಲ್ಲಿಬಾರು ಶಾಲೆಯ ಸಹಶಿಕ್ಷಕ ರಾಮನಾಥ ಮೇಸ್ತ, ಸಂಚಲನ ಅಧ್ಯಕ್ಷ ಮಹದೇವ ಮರಾಠಿ, ಕಾರ್ಯದರ್ಶಿ ರಾಜು ಮರಾಠಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಚಲನ ಹೊಸೂರು ಖಜಾಂಚಿ ನಾಗಪ್ಪ ಮರಾಠಿ ಸ್ವಾಗತಿಸಿ, ವಂದಿಸಿದರು. ಗೌರವಾಧ್ಯಕ್ಷ ತಿಮ್ಮ ಮರಾಠಿ ವಂದಿಸಿದರು. ಶಿಕ್ಷಕ ಸುಧಾಕರ ಪಿ. ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕುಂದಪ್ರ ಕನ್ನಡದ ಹಾಸ್ಯ ಕಲಾವಿದ ಮನು ಹಂದಾಡಿ ಅವರಿಂದ ನಗೆ ಒಡ್ಡೋಲಗ, ಸುರಭಿ ರಿ. ಬೈಂದೂರು ಪ್ರಸ್ತುತಿಯ ಗಣೇಶ್ ಎಂ. ಉಡುಪಿ ನಿರ್ದೇಶನ, ಸತ್ಯನಾ ಕೊಡೇರಿ ರಂಗಸಜ್ಜಿಕೆಯ ’ಚೋಮನ ದುಡಿ’ ನಾಟಕ ಪ್ರದರ್ಶನಗೊಂಡಿತು.