ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಯುವಜನರು ದೇಶದ ಆಸ್ತಿ. ಯುವಕರು ಬದುಕಿನಲ್ಲಿ ಶಿಸ್ತು, ಸಂಯಮ ರೂಢಿಸಿಕೊಳ್ಳುವುದರ ಜೊತೆಗೆ ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡರೆ ದೇಶದ ಭವಿಷ್ಯ ಉಜ್ವಲವಾಗಲಿದೆ ಎಂದು ರಿಚರ್ಡ್ ಅಲ್ಮೇಡಾ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಜಿ. ಎಸ್. ಹೆಗ್ಡೆ ಹೇಳಿದರು.
ಅವರು ನೆಹರು ಯುವ ಕೇಂದ್ರ ಉಡುಪಿ, ಸ್ನೇಹ ಮಹಿಳಾ ಮಂಡಲ ರಿ. ಮರವಂತೆ ಹಾಗೂ ರಿಚರ್ಡ್ ಅಲ್ಮೇಡಾ ಮೆಮೋರಿಯಲ್ ಕಾಲೇಜು ನಾವುಂದ ಇವುಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ನೆರೆ-ಹೊರೆ ಯುವ ಸಂಸತ್ತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸ್ವಚ್ಛಭಾರತ ಹಾಗೂ ಜಲಸಂರಕ್ಷಣೆ ಇಂದಿನ ತುರ್ತಾಗಿದ್ದು, ಅದರೊಂದಿಗೆ ದೇಶದ ಆಡಳಿತದ ಒಳನೋಟಗಳನ್ನು ಅರ್ಥಮಾಡಿಕೊಂಡು ವೈಚಾರಿಕವಾಗಿ ಸದೃಢವಾಗುವುದು ಅಗತ್ಯವಾಗಿದೆ ಎಂದರು.
ಸ್ನೇಹ ಮಹಿಳಾ ಮಂಡಲದ ಅಧ್ಯಕ್ಷೆ ಅನಿತಾ ಆರ್. ಕೆ. ಅಧ್ಯಕ್ಷತೆ ವಹಿಸಿದ್ದರು. ಸ್ವಚ್ಛ ಭಾರತ ಹಾಗೂ ಜಲ ಸಾಕ್ಷರತೆಯ ಬಗ್ಗೆ ಜೋಸೆಫ್ ಜಿ. ಎಂ. ರೆಬೆಲ್ಲೊ ಉಪನ್ಯಾಸ ನೀಡಿದರು. ಯುವ ಜನತೆ ಹಾಗೂ ಸಹಭಾಗಿತ್ವ ಪ್ರಭಾಪ್ರಭುತ್ವ ವಿಷಯದ ಕುರಿತು ಪಂಚಾಯತ್ ರಾಜ್ ವಿಷಯ ಪರಿಣತ ಎಸ್. ಜನಾರ್ದನ ಮರವಂತೆ ಉಪನ್ಯಾಸ ನೀಡಿದರು. ಯುವ ಜನತೆ ಹಾಗೂ ರಾಷ್ಟ್ರಭಕ್ತಿ ವಿಷಯದ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಡಾ. ಸುಬ್ರಹ್ಮಣ್ಯ ಭಟ್ ಉಪನ್ಯಾಸ ನೀಡಿದರು.
ನೆಹರು ಯುವ ಕೇಂದ್ರದ ಸುನಿಲ್ ಹೆಚ್. ಜಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಿಚರ್ಡ್ ಅಲ್ಮೇಡಾ ಕಾಲೇಜು ವಿದ್ಯಾರ್ಥಿನಿ ನಮೃತಾ ಸ್ವಾಗತಿಸಿದರು. ವಿದ್ಯಾರ್ಥಿ ಕಿರಣ ಕಾರ್ಯಕ್ರಮ ನಿರೂಪಿಸಿದರು.