ಬೈಂದೂರು: ಸಮೀಪದ ಯಡ್ತರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತಿ ಹೊಂದಿದ ಮುಖ್ಯೋಪಧ್ಯಾಯ ಎಚ್. ಕೃಷ್ಣಪ್ಪ ಶೆಟ್ಟಿಯವರನ್ನು ಬೀಳ್ಕೊಡುವ ಸಮಾರಂಭ ಇತ್ತಿಚಿಗೆ ಜರುಗಿತು.
ಸಮಾರಂಭದಲ್ಲಿ ಎಚ್. ಕೃಷ್ಣಪ್ಪ ಶೆಟ್ಟಿ ಮತ್ತು ಉಪಾ ಕೆ. ಶೆಟ್ಟಿ ದಂಪತಿಯನ್ನು ಸನ್ಮಾನಿಸಿದ ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಮಾತನಾಡಿ ಶಾಲೆಯ ಅಭಿವೃದ್ಧಿಯಲ್ಲಿ ಪ್ರತಿ ಶಿಕ್ಷಕರ ಪಾತ್ರವೂ ಪ್ರಾಮುಖ್ಯವಾದುದು. ವಿದ್ಯಾರ್ಥಿಗಳಲ್ಲಿ ಉತ್ತಮವಾದ ಚಿಂತನೆಯನ್ನು ರೂಪಿಸಿ ಅವರನ್ನು ಸಮಾಜದ ಆಸ್ತಿಯನ್ನಾಗಿಸುವ ಜವಾಬ್ದಾರಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪೋಷಕರ ಮೇಲಿದೆ. ಕೃಷ್ಣಪ್ಪ ಶೆಟ್ಟಿಯವರು ಶಾಲೆಯನ್ನು ಮಾದರಿಯಾಗಿ ಬೆಳೆಸಿದ ರೀತಿ ಇತರರಿಗೂ ಪ್ರೇರಣೆಯಾದುದು ಎಂದು ಹೇಳಿದರು.
ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಬಾಬು ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ರೂಪ್ಲಾ ಕಾಮತ್, ಯಡ್ತರೆ ಗ್ರಾ,ಪಂ. ಸದಸ್ಯೆ ಮೀನಾಕ್ಷಿ, ಬೈಂದೂರು ವಲಯ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಗೀತಾ ಶೆಟ್ಟಿ, ರಂಗಕರ್ಮಿ ಗಣೇಶ ಕಾರಂತ್, ಶಿಕ್ಷಕ ರಾಮಕೃಷ್ಣ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿಗಳ ಪರವಾಗಿ ಸುಧಾಕರ ಪೂಜಾರಿ ಮಾತನಾಡಿದರು.
ಕೃಷ್ಣಪ್ಪ ಶೆಟ್ಟಿಯವರು ತಮ್ಮ ನಿವೃತ್ತಿಯ ಸವಿನೆನಪಿಗಾಗಿ ಶಾಲೆಯ ಆವರಣದಲ್ಲಿ 5 ವಿವಿಧ ಜಾತಿಯ ಗಿಡಗಳನ್ನು ನೆಟ್ಟರೇ, ಶಾಲಾ ಶಿಕ್ಷಕರು ಅವರಿಗೆ ಉಂಗುರವನ್ನು ಉಡುಗೊರೆಯಾಗಿ ನೀಡಿ ಗೌರವಿಸಿದರು.
ಶಿಕ್ಷಕಿಯರಾದ ಶಾರದಾ ಸ್ವಾಗತಿಸಿ, ಮನೋರಮಾ ಧನ್ಯವಾದಗೈದರು. ಮಾಲತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಭಾರ ಮುಖ್ಯ ಶಿಕ್ಷಕಿ ಲಕ್ಷ್ಮೀ ಬಿ. ಕಾರ್ಯಕ್ರಮ ನಿರೂಪಿಸಿದರು.