ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬದುಕನ್ನು ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಡುವವರು ಹಲವು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅವರು ಸುಖ, ಸಂಪತ್ತಿನಿಂದ ವಂಚಿತರಾಗುವುದು ಅನಿವಾರ್ಯ. ಆದರೆ ಜನರು ಆ ಕಾರಣಕ್ಕಾಗಿ ಅವರಿಗೆ ನೀಡುವ ಗೌರವ ಮತ್ತು ಮಾಡುವ ಅವರ ಸ್ಮರಣೆ ಅವರು ತ್ಯಾಗಮಾಡಿದ ಸುಖ, ಸಂಪತ್ತಿಗಿಂತ ಅಧಿಕ ಮೌಲ್ಯ ಹೊಂದಿರುತ್ತದೆ ಹಾಗೂ ಹೆಚ್ಚು ಕಾಲ ಬಾಳುತ್ತದೆ ಎಂದು ಬಾರ್ಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನದ ಅಧ್ಯಕ್ಷ ಎ. ಬಿ. ಶೇರೆಗಾರ್ ಹೇಳಿದರು.
ಇಲ್ಲಿನ ಶಾರದಾ ಮಂಟಪದಲ್ಲಿ ಶನಿವಾರ ಆರಂಭವಾದ ಲಾವಣ್ಯ ಬೈಂದೂರು ಇದರ 43ನೆ ವಾರ್ಷಿಕೋತ್ಸವ ‘ರಂಗ ಲಾವಣ್ಯ-2020’ ಹಾಗೂ ಬಿ. ಮಾಧವ ರಾವ್ ಸ್ಮರಣೆಯ ಮೂರು ದಿನಗಳ ರಂಗಮಾಧವ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಮಾಧವ ರಾವ್ ಲಾವಣ್ಯದ ಸದಸ್ಯರಾಗಿ, ಕಲಾವಿದರಾಗಿ, ಬೆಂಬಲಿಗರಾಗಿ ದೀರ್ಘಕಾಲ ಅದರ ಯಶಸ್ಸಿಗೆ ದುಡಿದವರು. ವಿವಿಧ ಸಾರ್ವಜನಿಕ, ಧಾರ್ಮಿಕ ಕ್ಷೇತ್ರಗಳಲ್ಲೂ ಕೆಲಸ ಮಾಡಿದವರು. ಅವರನ್ನು ನಾಟಕೋತ್ಸವದ ಮೂಲಕ ಸ್ಮರಿಸುತ್ತಿರುವುದು ಅವರಿಗೆ ಸಲ್ಲಿಸಿದ ಅರ್ಥಪೂರ್ಣ ಗೌರವ ಎಂದು ಅವರು ಹೇಳಿದರು.
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಶುಭಶಂಸನೆಗೈದು ಸಂಘ-ಸಂಸ್ಥೆಗಳ ಯಶಸ್ಸಿನ ಹಿಂದೆ ಸದಸ್ಯರ ಒಗ್ಗಟ್ಟಾದ ಶ್ರಮವಿದ್ದು, ಅದರಿಂದಾಗಿಯೇ ಸಂಸ್ಥೆಯ ಕೀರ್ತಿ ಉತ್ತುಂಗಕ್ಕೆ ಏರುವಂತಾಗುತ್ತವೆ ಎಂದು ಹೇಳಿದರು.
ಲಾವಣ್ಯದ ಅಧ್ಯಕ್ಷ ಎಚ್. ಉದಯ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಲಾವಣ್ಯಕ್ಕೆ ರೂ 1.5 ಲಕ್ಷ ಮೌಲ್ಯದ ಹೋಮ್ ಥಿಯೇಟರ್ ಕೊಡುಗೆಯಾಗಿತ್ತು ಅದನ್ನು ಉದ್ಘಾಟಿಸಿದ ಜ್ಯೋತಿಷಿ ಡಾ. ಮಹೇಂದ್ರ ಭಟ್ ಮಾತನಾಡಿ ಬೈಂದೂರಿನ ಸಾಂಸ್ಕೃತಿಕ ಪರಿಸರವನ್ನು ಸಮೃದ್ಧಗೊಳಿಸುತ್ತಿರುವ ಲಾವಣ್ಯಕ್ಕೆ ಶುಭ ಕೋರಿದರು. ಅದರಂತಹ ಸಂಸ್ಥೆಗಳಿಗೆ ಜನರು ಐದಾರ್ಯ ತೋರಬೇಕು ಎಂದರು.
ಯಡ್ತರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೂಕಾಂಬು ದೇವಾಡಿಗ, ಎಂಜಿನಿಯರ್ ರಾಘವೇಂದ್ರ ಮಯ್ಯ, ದೇವಾಡಿಗ ನವೋದಯ ಸಂಘ ಯುವ ಘಟಕದ ಅಧ್ಯಕ್ಷ ಚರಣ್ ಬೈಂದೂರು ಇದ್ದರು. ರಾಜ್ಯ ಉದ್ದಿಮೆ ರತ್ನ ಪ್ರಶಸ್ತಿ ಪಡೆದ ಸುಮುಖ ಸರ್ಜಿಕಲ್ಸ್‌ನ ಮಾಲೀಕರಾದ ಬಿ. ಎಸ್. ಸುರೇಶ ಶೆಟ್ಟಿ, ಯು. ಪಾಂಡುತರಂಗ ಪಡಿಯಾರ್ ಮತ್ತು ದಾನಿ ಡಾ. ಮಹೇಂದ್ರ ಭಟ್ ಅವರನಗ್ನು ಸನ್ಮಾನಿಸಲಾಯಿತು. ಮಂಜುನಾಥ ಶಿರೂರು ಮತ್ತು ದಯಾನಂದ ಪಿ ಪರಿಚಯಿಸಿದರು.
ಮುಖ್ಯ ಸಲಹೆಗಾರ ಗಿರೀಶ ಬೈಂದೂರು ಸ್ವಾಗತಿಸಿದರು. ಶಶಿಧರ ಕಾರಂತ್ ವರದಿ ಓದಿದರು. ಉಪಾಧ್ಯಕ್ಷ ನರಸಿಂಹ ಬಿ. ನಾಯಕ್ ವಂದಿಸಿದರು. ವ್ಯವಸ್ಥಾಪಕ ಗಣಪತಿ ಎಸ್. ನಿರೂಪಿಸಿದರು. ಲಾವಣ್ಯ ಕಲಾವಿದರು ಬಿ. ಗಣೇಶ ಕಾರಂತ್ ನಿರ್ದೇಶನದಲ್ಲಿ ಡಾ. ಚಂದ್ರಶೇಖರ ಕಂಬಾರ ವಿರಚಿತ ’ನಾಯಿಕತೆ’ ನಾಟಕ ಪ್ರದರ್ಶಿಸಿದರು. ಯು. ಶ್ರೀನಿವಾಸ ಪ್ರಭು ಸಂಗೀತ ನೀಡಿದ್ದರು.