ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ರಂಗಭೂಮಿ ರೀತಿಯ ಕಲಾಪ್ರಕಾರಗಳು ಸಮಾಜಕ್ಕೆ ಬಹುಮುಖ್ಯದುದು. ಮನುಷ್ಯ, ಸಮುದಾಯ, ಭಾಷೆ ಮುಂತಾದವುಗಳ ನಡುವಿನ ಅರ್ಥೈಸುವಿಕೆಗೆ ನಾಟಕ ಪ್ರಮುಖ ಮಾಧ್ಯಮವಾಗಿದೆ. ನಾಟಕ ಕೇವಲ ನಟನೆ ಮಾತ್ರವೇ ಆಗಿ ಉಳಿಯದೇ ನಟನೊಬ್ಬ ತನ್ನನ್ನು ತಾನು ಅರಿತುಕೊಳ್ಳುವ ಸಮಾಜವನ್ನು ಹಾಗೂ ಸುತ್ತಲಿನ ಭೌದಿಕ ಸ್ಥಿತಿಯನ್ನು ಅರಿಯುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ಉಡುಪಿ ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಇಲ್ಲಿನ ಶ್ರೀ ಶಾರದಾ ವೇದಿಕೆಯಲ್ಲಿ ಶನಿವಾರ ಆರಂಭವಾದ ’ರಂಗ ಲಾವಣ್ಯ-2020’ ಹಾಗೂ ಬಿ. ಮಾಧವ ರಾವ್ ಸ್ಮರಣೆಯ ಮೂರು ದಿನಗಳ ’ರಂಗಮಾಧವ’ ನಾಟಕೋತ್ಸವದ ಎರಡನೇ ದಿನದ ಮುಖ್ಯ ಅತಿಥಿಯಾಗಿ ಮಾತನಾಡಿದರು. ರಂಗಭೂಮಿ ಶ್ರಮಜೀವಿಗಳ ಲೋಕ. ವೇದನೆಯನ್ನು ಹಾಡಾಗಿಸಿ, ಸಮುದಾಯವನ್ನು ತಲುಪುವ ಪ್ರಕ್ರಿಯೆಯಲ್ಲಿ ಅದು ನಿರತವಾಗಿದೆ. ಸುಖ-ದು:ಖವನ್ನು ಚಂದವಾಗಿ ಅಭಿವ್ಯಕ್ತಿಗೊಳಿಸಲು ರಂಗಭೂಮಿಯಿಂದ ಸಾಧ್ಯ. ಇಂದು ಆರ್ಥಿಕ ಸಂಕಷ್ಟಗಳಿಂದ ಹಲವು ನಾಟಕ ಕಲಾ ಸಂಸ್ಥೆಗಳು ಮುಚ್ಚಲ್ಪಟ್ಟಿದೆ, ಆದರೆ ಬೈಂದೂರಿನ ಲಾವಣ್ಯ ಸಂಸ್ಥೆ ಇದಕ್ಕೆ ಅಪವಾದವಾಗಿದ್ದು, ನಾಲ್ಕು ದಶಕಗಳಿಂದ ನಿರಂತರವಾಗಿ ರಂಗ ಚಟುವಟಿಕೆಗಳ ಮೂಲಕ ರಾಜ್ಯಾದ್ಯಂತ ತನ್ನೊಂದಿಗೆ ಬೈಂದೂರಿನ ಹೆಸರು ಮತ್ತು ಕೀರ್ತಿಯನ್ನು ಉತ್ತುಂಗಕ್ಕೇರಿಸಿದೆ. ಎಂದು ಅವರು ಶ್ಲಾಘಿಸಿದರು.
ಲಾವಣ್ಯದ ಗೌರವಾಧ್ಯಕ್ಷ ಉಪ್ಪುಂದ ಶ್ರೀನಿವಾಸ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಗ್ರಾಮೀಣ ಪರಿಸರದಲ್ಲಿ ಕಳೆದ ಮೂರ‍್ನಾಲ್ಕು ದಶಕಗಳಿಂದ ವೈದ್ಯಕೀಯ ಸೇವೆ ನೀಡುತ್ತಿರುವ ಹಿರಿಯ ವೈದ್ಯರಾದ ಡಾ. ಕೆ. ಆರ್. ನಂಬಿಯಾರ್, ಡಾ. ಸಚ್ಚಿದಾನಂದ ಶೆಟ್ಟಿ ಹಾಗೂ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಶಂಕರ ಶೆಟ್ಟಿ, ಅವರನ್ನು ಸನ್ಮಾನಿಸಲಾಯಿತು. ಉಡುಪಿ ಸಂಸ್ಕೃತಿ ವಿಶ್ವಪ್ರತಿಷ್ಠಾನದ ಸಂಚಾಲಕ ರವಿರಾಜ್ ಪಿ. ಶುಭ ಹಾರೈಸಿದರು.
ಬೈಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾಗೀರಥಿ ಸುರೇಶ್, ಡಾ. ಪ್ರಕಾಶ್ ದೇವಾಡಿಗ, ಡಾ. ಬಿ. ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ಲಕ್ಷ್ಮಣ ಯಡ್ತರೆ, ಬೈಂದೂರು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕಿರಣ್ ಬೈಂದೂರು ಇದ್ದರು. ಸದಾಶಿವ ಡಿ. ಪಡುವರಿ ಸ್ವಾಗತಿಸಿದರು. ಸುರೇಶ ಹುದಾರ್ ವಂದಿಸಿದರು. ಚೈತ್ರ ಯಡ್ತರೆ ನಿರೂಪಿಸಿದರು. ನಂತರ ಚಿತ್ತಾರ ಬೆಂಗಳೂರು ಕಲಾವಿದರು ರಾಜೇಂದ್ರ ಕಾರಂತ್ ರಚಿಸಿ, ನಿರ್ದೇಶಿಸಿದ ’ನಾಯಿ ಕಳೆದಿದೆ’ ನಾಟಕ ಪ್ರದರ್ಶನಗೊಂಡಿತು.
ಹೇಳಿಕೆ: ಕಲಾವಿದರ ಮೇಲೆ ಆಳುವವರು ಸಿದ್ಧಾಂತದ ನೊಗವನ್ನು ಬಲವಂತದಿಂದ ಹೊರಿಸಿದಾಗ ಕಲೆ ಕಮರುತ್ತದೆ ನರಳುತ್ತದೆ. ಆದರೆ ಲಾವಣ್ಯಕ್ಕೆ ಜನಾಶ್ರಯವೇ ಬೆನ್ನೆಲುಬು. ರಂಗಾಸಕ್ತ ಸಹೃದಯಿ ಕಲಾಭಿಮಾನಿಗಳು, ಕಲಾ ಪೋಷಕರು ಕೈಹಿಡಿದು ಮುನ್ನೆಡಿಸಿದ ಪರಿಣಾಮ ನಲವತ್ತೊಂದು ವಸಂತಗಳಲ್ಲಿ ಲವಲವಿಕೆಯಿಂದಲೇ ಬೆಳೆದುಬಂದಿದೆ. ಲಾವಣ್ಯ, ಒಳ ಹೊರಗೆ ತನ್ನದೇ ಆದ ಉತ್ಸಾಹಿ ಸಮುದಾಯವನ್ನು ಕಟ್ಟಿಕೊಂಡಿದೆ. ಚಲನಶೀಲತೆಯನ್ನು ಅಳವಡಿಸಿಕೊಂಡಿದ್ದರಿಂದಲೇ ವರ್ಷದಿಂದ ವರ್ಷಕ್ಕೆ ನಿರಂತರವಾಗಿ ಬೆಳೆಯುತ್ತಿದೆ.- ತಲ್ಲೂರು ಶಿವರಾಮ ಶೆಟ್ಟಿ, ಅಧ್ಯಕ್ಷರು ರಂಗಭೂಮಿ (ರಿ.,) ಉಡುಪಿ