ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ: ವ್ಯಂಗ್ಯಚಿತ್ರ ಕಲಾವಿದ ಪಂಜು ಗಂಗೊಳ್ಳಿಯವರು ಕುಂದಾಪ್ರ ಕನ್ನಡಕ್ಕೆ ನೀಡಿದ ಸೇವೆಯನ್ನು ಪರಿಗಣಿಸಿ ಟೀಮ್ ಅಭಿಮತ ಮತ್ತು ಜನಸೇವಾ ಟ್ರಸ್ಟ್ ವತಿಯಿಂದ ಅವರ ನಿವಾಸದಲ್ಲಿ ಗೌರವಿಸಲಾಯಿತು.
ಕುಂದಾಪ್ರ ಕನ್ನಡದ ಕುರಿತಾದ ಅಂದಾಜು ಎಂಟುನೂರು ಪುಟಗಳಾಗುವಷ್ಟು ಶಬ್ದಕೋಶವನ್ನ ಸಂಗ್ರಹಿಸಿರುವ ಪಂಜು ಗಂಗೊಳ್ಳಿಯವರ ಮತ್ತು ಅವರ ಬಳಗದ ಈ ಕೆಲಸ ನಿಜಕ್ಕೂ ಅರ್ಥಪೂರ್ಣವಾಗಿದ್ದು, ಪ್ರಾದೇಶಿಕ ಭಾಷೆಯೊಂದರ ಉಳಿವಿಗಾಗಿ ನೀಡಿದ ಬಹುಮುಖ್ಯ ಕೊಡುಗೆ ಎಂದು ಸಾಂಸ್ಕೃತಿಕ ಚಿಂತಕ ಉದಯ್ ಶೆಟ್ಟಿ ಕೋಟ ಅಭಿಪ್ರಾಯ ಪಟ್ಟರು
ಹೊರನಾಡ ಕನ್ನಡಿಗರಾದರೂ ತನ್ನ ಹುಟ್ಟು ನೆಲದ ಬಗ್ಗೆ ಅತೀವ ಪ್ರೀತಿ, ಕಾಳಜಿ ಇರಿಸಿಕೊಂಡಿರುವ ಗಂಗೊಳ್ಳಿಯ ತನ್ನ ಮನೆಯ ಪರಿಸರದಲ್ಲಿ ಸಾವಯವ ಕೃಷಿಯನ್ನು ಮಾಡುತ್ತಾ, ಗಂಗಾವಳಿ ನದಿಯ ಬದುವಲ್ಲಿ ಸಂಜೆ ಸೂರ್ಯನನ್ನು ದಿಟ್ಟಿಸುತ್ತಾ ಮನಸ ಕ್ಯಾನ್ವಾಸಿನಲ್ಲಿ ಭಾವನೆಯ ಚಿತ್ತಾರ ಮೂಡಿಸುವ ಪಂಜು ಗಂಗೊಳ್ಳಿ ಸಮಾಜವಾದಿ ನಿಲುವಿನೊಂದಿಗೆ ಬದುಕಿದವರು. ನಾಡು ಕಂಡ ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟರ ಗರಡಿಯಲ್ಲಿ ಬೆಳೆದು ನಂತರ ಮುಂಬೈ ನಗರದಲ್ಲಿ ಸಾಹಿತ್ಯ ಚಟುವಟಿಕೆಯಲ್ಲಿ, ಅಂತರಾಷ್ಟ್ರೀಯ ಮಾನ್ಯತೆಯ ಪತ್ರಿಕೆಗಳಿಗೆ ವ್ಯಂಗ್ಯಚಿತ್ರ ಕಲಾವಿದನಾಗಿ, ಹೀಗೆ ತನ್ನನ್ನ ತಾನು ಸೃಜನಾತ್ಮಕವಾಗಿ ತೊಡಗಿಸಿಕೊಂಡಿದ್ದಾರೆ.