ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಉಪವಿಭಾಗದ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧೆಡೆಗಳಲ್ಲಿ ನಡೆಸಲಾಗುತ್ತಿದ್ದ ರಿಕ್ರಿಯೇಶನ್ ಕ್ಲಬ್‌ಗಳ ಮೇಲೆ ಭಾನುವಾರ ಸಂಜೆ ದಾಳಿ ನಡೆಸಿರುವ ಪೊಲೀಸರು ಜುಗಾರಿ ಆಟದಲ್ಲಿ (ಗ್ಯಾಂಬ್ಲಿಂಗ್) ತೊಡಗಿದ್ದ ೩೫ಕ್ಕೂ ಅಧಿಕ ಜುಗಾರಿಕೋರರನ್ನು ವಶಕ್ಕೆ ಪಡೆದು, ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ನಗದು, ಮೊಬೈಲ್, ಕಾರು, ಬೈಕುಗಳನ್ನು ವಶಕ್ಕೆ ಪಡೆದಿದ್ದಾರೆ.
ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೇಶ್ವರ ಗ್ರಾಮದ ಕಾಗೇರಿಯಲ್ಲಿರುವ ರಿಕ್ರಿಯೇಶನ್ ಕ್ಲಬ್‌ನಲ್ಲಿ ಜುಗಾರಿ ಆಡುತ್ತಿದ್ದ ಹದಿಮೂರು ಮಂದಿ, ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀ ಲಕ್ಷ್ಮೀ ಕ್ಲಬ್‌ನಲ್ಲಿ ಇಸ್ಪೀಟ್ ಆಡುತ್ತಿದ್ದ ಹನ್ನೊಂದು ಮಂದಿ, ಸಿದ್ದಾಪುರ ಗ್ರಾಮ ದೊಟ್ಟಿನಬೇರು ಶಾಂತ ರಿಕ್ರಿಯೇಷನ್ ಕ್ಲಬ್‌ನಲ್ಲಿ ಜುಗಾರಿ ಆಡುತ್ತಿದ್ದ ಏಳು ಮಂದಿ ಹಾಗೂ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಯಡ್ತರೆ ಗ್ರಾಮದ ಎಂಜಿ ರಿಕ್ರಿಯೇಷನ್ ಕ್ಲಬ್‌ನಲ್ಲಿ ಜುಗಾರಿ ಆಡುತ್ತಿದ್ದ ಹನ್ನೊಂದು ಮಂದಿಯನ್ನು ದಾಳಿಯ ವೇಳೆ ವಶಕ್ಕೆ ಪಡೆಯಲಾಗಿತ್ತು.
ಕುಂದಾಪುರ ತಾಲೂಕಿನ ಗೋಳಿಯಂಗಡಿ, ಸಿದ್ದಾಪುರ, ಕೋಟೇಶ್ವರ ಕಾಗೇರಿ, ಬೈಂದೂರು ತಾಲೂಕಿನ ಯಡ್ತರೆ ಉಪ್ಪುಂದ ಸೇರಿದಂತೆ ವಿವಿದೆಡೆ ರಿಕ್ರಿಯೇಶನ್ ಕ್ಲಬ್‌ಗಳ ಮೇಲೆ ದಾಳಿ ನಡೆಸಿ, ಜುಗಾರಿ ಆಡುತ್ತಿದ್ದ ಆಪಾದಿತರ ಸಹಿತ ವಾಹನ ಹಾಗೂ ಮೊಬೈಲ್ ಸೀಜ್ ಮಾಡಲಾಗಿದೆ. ಕ್ಲಬ್ ಸದಸ್ಯತ್ವ ಇಲ್ಲದವರು, ಐಡಿ ಕಾರ್ಡ್ ಇಲ್ಲದ ಆಟಗಾರರು ಕ್ಲಬ್‌ನಲ್ಲಿರುವುದು, ಸಿಸಿ ಟಿವಿಗಳನ್ನು ಆಫ್ ಮಾಡಿ ಆಟವಾಡುತ್ತಿರುವ ಬಗ್ಗೆ ದೂರು ಆಧರಿಸಿ ದಾಳಿ ನಡೆಸಿರುವು ತಿಳಿದು ಬಂದಿದೆ. ರಿಕ್ರಿಯೇಶನ್ ಕ್ಲಬ್‌ಗಳು ನ್ಯಾಯಾಲಯದ ಅನುಮತಿಯಲ್ಲಿ ನಡೆದರೂ ಕೂಡ ಷರತ್ತುಗಳನ್ನು ಪಾಲಿಸದೇ ನಡೆಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಕುಂದಾಪುರ ಎಎಸ್ಪಿ ಹರಿರಾಮ್ ಶಂಕರ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಗೋಪಿಕೃಷ್ಣ ನೇತೃತ್ವದಲ್ಲಿ, ವೃತ್ತ ನಿರೀಕ್ಷಕ ಸುರೇಶ್ ಜಿ.ನಾಯ್ಕ್, ಕುಂದಾಪುರ ಪಿಎಸೈ ಹರೀಶ್ ಆರ್. ನಾಯ್ಕ್, ಶಂಕರನಾರಾಯಣ ಪಿಎಸೈ ಶ್ರೀಧರ ನಾಯ್ಕ್, ಬೈಂದೂರು ಪಿಎಸೈ ಸಂಗೀತಾ ಹಾಗೂ ಸಿಬ್ಬಂದಿಗಳು ಏಕಕಾಲದಲ್ಲಿ ವಿವಿಧೆಡೆ ಈ ದಾಳಿ ನಡೆಸಿದ್ದರು. ಮೂರು ಠಾಣೆಗಳಲ್ಲಿಯೂ ಪ್ರತ್ಯೇಕ ಪ್ರಕರಣ ದಾಖಲಾಗಿದೆ.