ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ: ಗ್ರಾಮ ಸ್ವರಾಜ್ಯದ ಸ್ಥಾಪನೆಗೆ ಸರ್ಕಾರದಿಂದಲೇ ಅಡ್ಡಗಾಲು!

Call us

Call us

Call us

ಕುಂದಾಪ್ರ ಡಾಟ್ ಕಾಂ ಲೇಖನ.
ಗ್ರಾಮ ಸರ್ಕಾರವನ್ನು ಸ್ಥಳೀಯ ಸ್ವಯಂ ಸರ್ಕಾರವಾಗಿ ರೂಪಿಸುವ ಮೂಲಕ ಗ್ರಾಮ ಸ್ವರಾಜ್ಯದ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವ ಬದಲು ಗ್ರಾಮ ಪಂಚಾಯತ್ ಮತ್ತು ಗ್ರಾಮಸಭೆಯ ಅಧಿಕಾರವನ್ನು ಕಿತ್ತುಕೊಂಡು ಇಡೀ ಪಂಚಾಯತ್ ರಾಜ್ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಹೊರಟಿರುವ ಕರ್ನಾಟಕ ರಾಜ್ಯ ಸರ್ಕಾರದ ಎಲ್ಲಾ ನಡೆಗಳನ್ನು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ತೀವ್ರವಾಗಿ ಖಂಡಿಸುತ್ತದೆ. ಈ ನಿಟ್ಟಿನಲ್ಲಿ ಸರ್ಕಾರವು ಕೆಲವು ಮುಖ್ಯ ತೀರ್ಮಾನಗಳನ್ನು ತೆಗೆದುಕೊಳ್ಳಲು ಮುಂದಾಗಿದೆ ಎಂದು ಕಳೆದ ಕೆಲವು ದಿನಗಳಿಂದ ಪತ್ರಿಕೆಯಲ್ಲಿ ವರದಿಯಾಗಿದೆ. ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯದೆ 1993ಕ್ಕೆ ತಿದ್ದುಪಡಿ ತರಲು ಬುಧುವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿರುವುದಾಗಿ ವರದಿಯಾಗಿದೆ. ತಿದ್ದುಪಡಿ ತರಬೇಕಾದ ಸುಮಾರು 20 ಅಂಶಗಳ ಬಗ್ಗೆ ಪಂಚಾಯತ್ ರಾಜ್ ಇಲಾಖೆ ಪ್ರಸ್ಥಾವನೆ ಸಿದ್ಧಪಡಿಸಿ ಕಾನೂನು ಇಲಾಖೆಗೆ ಅಭಿಪ್ರಾಯ ನೀಡುವಂತೆ ಸೂಚಿಸಿದ್ದು, ಸಂಪುಟದ ಸೂಚನೆಯ ಮೇರೆಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಮಿತಿ ಸಭೆಯು ತನ್ನ ಅಭಿಪ್ರಾಯವನ್ನು ನೀಡಿದ್ದು, ಕಾನೂನು ಇಲಾಖೆಯ ಅಭಿಪ್ರಾಯದಂತೆ ಮುಂದಿನ ಸಂಪುಟ ಸಭೆಯ ಒಪ್ಪಿಗೆ ಪಡೆದು ಮುಂದಿನ ವಾರ ಸದಸನದಲ್ಲಿ ಮಂಡಿಸುವುದಾಗಿ’ ತಿಳಿದು ಬಂದಿರುವ ಬಗ್ಗೆ ವರದಿಯಾಗಿದೆ.

Call us

Click Here

ತಿದ್ದುಪಡಿಗಳು ಮಾಡಲು ಹೊರಟಿರುವ ಅಂಶಗಳು: 1. ತ್ರಿಸ್ಥರ ಪಂಚಾಯತ್‌ಗಳಿಗೆ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ಕಾಯ್ದೆಯ ಪ್ರಕಾರ ನಿಗದಿ ಮಾಡಿದ್ದ ಎರಡು ಅವಧಿಗೆ (10 ವರ್ಷಗಳಿಗೆ) ಇರುವ ಮೀಸಲಾತಿಯನ್ನು ಒಂದೇ ಅವಧಿಗೆ (5 ವರ್ಷಗಳಿಗೆ) ಸಡಿಲ ಮಾಡಲು ಮತ್ತು ಇದರ ಕುರಿತಾಗಿರುವ ನಿಯಮಗಳನ್ನು ತೆಗೆದು ಹಾಕಲು ಸರ್ಕಾರ ತಯಾರಾಗಿದೆ. 2. ಜಿಲ್ಲಾ, ತಾಲೂಕು ಹಾಗು ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಅಧಿಕಾರವನ್ನು 5 ವರ್ಷದ ಬದಲಿಗೆ 30 ತಿಂಗಳ ಅವಧಿ ನಿಗಧಿ ಪಡಿಸಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳುವುದು ಬಹುತೇಕ ಖಚಿತವಾಗಿದೆ. ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಅಧಿಕಾರ ಅವಧಿಯು ಪೂರ್ಣ 5 ವರ್ಷಗಳು ಎಂದು ಗ್ರಾಮ ಸ್ವರಾಜ್ ಕಾಯ್ದೆ ಸ್ಪಷ್ಟಪಡಿಸಿದ್ದರೂ ಕೂಡ ಸುದೀರ್ಘ ಅವಧಿಯನ್ನು ಒಪ್ಪಿಕೊಳ್ಳದ ಸದಸ್ಯರು ಅವಿಶ್ವಾಸ ನಿರ್ಣಯ ಮಂಡನೆ ಮೂಲಕ ಆಡಳಿತ ವ್ಯವಸ್ಥೆ ಏರುಪೇರಾಗುವಂತೆ ಮಾಡುತ್ತಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿರುವ ಸರ್ಕಾರ ಎಲ್ಲಾ ಪಂಚಾಯತ್ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಅವಧಿಯನ್ನು 30 ತಿಂಗಳ (2.5 ವರ್ಷದ) ಅವಧಿಗೆ ಗೊತ್ತುಪಡಿಸಲು ತೀರ್ಮಾನಿಸಿದೆ. ಎಮದು ವರದಿಯಾಗಿದೆ. “ತಳಮಟ್ಟದಲ್ಲಿ ನಾಯಕತ್ವ ಬೆಳೆಸುವ ಉದ್ದೇಶದಿಂದ ಪಂಚಾಯತ್ ಅಧ್ಯಕ್ಷರ ಅವಧಿಯನ್ನು ೨ ಅವಧಿಗೆ ಅಥವ 10 ವರ್ಷಗಳಿಗೆ ನಿಗದಿಪಡಿಸಲಾಗಿದೆ. ಒಂದೇ ಅವಧಿಗೆ ಮೀಸಲಾತಿ ನಿಗದಿಪಡಿಸಿದರೆ ಚುನಾಯಿತ ಪ್ರತಿನಿಧಿಗಳಿಗೆ ಆಯಾ ಪ್ರದೇಶದಅಭಿವೃದ್ಧಿ ಆಸಕ್ತಿ ಇಲ್ಲವಾಗಬಹುದು ಅನ್ನುವಕಾರಣಕ್ಕೆ ಎರಡು ಅವಧಿಗೆ ಅವಕಾಶ ಕಲ್ಪಿಸಲಾಗಿತ್ತು” ಎಂಬ ಮಾಜಿ ಸ್ಪೀಕರ್, ಶಾಸಕರು ಹಾಗು ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿ ಸಮಿತಿಯ ಅಧ್ಯಕ್ಷರಾದ ಶ್ರೀ ರಮೇಶ್‌ಕುಮಾರ್‌ರವರ ಹೇಳಿಕೆಯು ಕಾಯ್ದೆಯಲ್ಲಿ ಮೀಸಲಾತಿ ನೀಡಿರುವುದರ ಹಿಂದಿನ ಉದ್ದೇಶವನ್ನು ಸ್ಪಷ್ಟವಾಗಿ ವಿವರಿಸುತ್ತದೆ.

ವಸತಿ ಯೋಜನೆಗೆ ಫಲಾನುಭವಿಗಳ ಪಟ್ಟಿಯ ಅಂತಿಮಗೊಳಿಸುವ ಗ್ರಾಮ ಸಭೆಯ ಅಧಿಕಾರಕ್ಕೆ ಕತ್ತರಿ: ಗ್ರಾಮ ಪಂಚಾಯತ್ ಹಾಗೂ ಗ್ರಾಮ ಸಭೆಯ ಹಕ್ಕು ಮತ್ತು ಅಧಿಕಾರಗಳನ್ನು ಮೊಟಕುಗೊಳಿಸುವಲ್ಲಿ ರಾಜ್ಯ ಸರ್ಕಾರ ಕಳೆದ ಹಲವು ತಿಂಗಳುಗಳಿಂದ ಇಂತಹದೇ ಹಲವಾರು ವ್ಯತಿರಿಕ್ತ ಹಾಗೂ ಆತಂಕಕಾರಿ ಹೆಜ್ಜೆಗಳನ್ನು ಇಡುತ್ತಿರುವ ಬಗ್ಗೆಯೂ ವರಧಿಯಾಗಿದೆ. ನಮ್ಮ ರಾಜ್ಯದ ವಸತಿ ಸಚಿವರು, ‘ಆಶ್ರಯ ಮನೆಗಳಿಗೆ ಫಲಾನುಭವಿಗಳ ಪಟ್ಟಿ ತಯಾರಿಸಿದ ಬಳಿಕ ಅದಕ್ಕೆ ಗ್ರಾಮ ಸಭೆಯ ಒಪ್ಪಿಗೆ ಇನ್ನು ಮುಂದೆ ಅಂತಿಮವಲ್ಲ. ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿ.ಇ.ಓ, ತಹಶೀಲ್ದಾರ್, ಪಿ.ಡಿ.ಓ.ಗಳನ್ನು ಒಳಗೊಂಡ ಉಸ್ತುವಾರಿ ಸಮಿತಿ ರಚಿಸಲಾಗುತ್ತದೆ. ಫಲಾನುಭವಿಗಳು ಅರ್ಹರೇ, ಅವರಿಗೆ ಮನೆ ದೊರಕಿದೆಯೇ ಎಂಬುದನ್ನು ಖಾತರಿಪಡಿಸುವ ಜವಾಬ್ದಾರಿಯೂ ಸಮಿತಿಯದು’ ಎಂದು ರಾಜ್ಯದ ವಸತಿ ಸಚಿವರು ಕೆಲವು ತಿಂಗಳುಗಳ ಹಿಂದೆ ಹೇಳಿಕೆ ನೀಡಿದ್ದಾರೆ. ರಾಜ್ಯದ ಕೆಲವು ಗ್ರಾಮ ಪಂಚಾಯತ್‌ಗಳಲ್ಲಿ ನಡೆದ ಅಕ್ರಮವನ್ನು ಆಧಾರವಾಗಿಟ್ಟುಕೊಂಡು ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿರುವ ಗ್ರಾಮ ಸಭೆಯ ಅಧಿಕಾರಗಳನ್ನು ಕಿತ್ತುಕೊಳ್ಳುವುದು ಈ ಸಮಸ್ಯೆಗೆ ಪರಿಹಾರವಲ್ಲ. ಅಕ್ರಮ ನಡೆದಿರುವ ಪಂಚಾಯತ್‌ಗಳಲ್ಲಿ ಸೂಕ್ತ ತನಿಖೆಯ ಮೂಲಕ ಅದನ್ನು ತಡೆಯಬೇಕೇ ಹೊರತು ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‌ಗಳ ಗ್ರಾಮ ಸಭೆಯ ºಕ್ಕನ್ನು ಕಸಿದುಕೊಳ್ಳುವುದು ಸಂವಿಧಾನ ಹಾಗೂ ಕಾನೂನು ಬಾಹಿರ.

ಜವಾಬ್ದಾರಿ ನಕ್ಷೆಯ ಪುರ‍್ರಚನೆ ಪ್ರಕ್ರಿಯೆ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ ಪ್ರಕಟವಾಗುವ ನವೆಂಬರ್ 2019ರ ‘ಕರ್ನಾಟಕ ವಿಕಾಸ’ದಲ್ಲಿ ತಮ್ಮ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ಸಲಹೆಗಾರರಾದ ಶ್ರೀ ಎಂ.ಕೆ. ಕೆಂಪೇಗೌಡ ಅವರು ಮಾಡಿರುವ ವರದಿಯಲ್ಲಿ “ದಿನಾಂಕ 19-10-2019ರಂದು ಮಾನ್ಯ ಸಚಿವರ (ತಮ್ಮ) ಜೊತೆ ನಡೆದ ಸಭೆಯಲ್ಲಿ ಕರ್ನಾಟಕ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂವಿಧಾನದ 73ನೇ ತಿದ್ದುಪಡಿಯ ಆಶಯದಂತೆ ೨೯ ವಿಷಯಗಳನ್ನೊಳಗೊಂಡ ಪ್ರಕಾರ್ಯಗಳನ್ನು ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ 1993ರ ಅನುಸೂಚಿ–I, II &IIIರಲ್ಲಿ ವಿವರಿಸಲಾಗಿದೆ. ಆದಾಗ್ಯೂ ಬಹಳಷ್ಟು ಕಾರ್ಯಕ್ರಮಗಳು ನಿಜವಾದ ಅರ್ಥದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ವರ್ಗಾವಣೆಯಾಗದಿರುವ ಅಂಶಗಳನ್ನು ವಿವರಿಸಲಾಯಿತು. ಈ ದಿಸೆಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಜವಾಬ್ದಾರಿ ನಕ್ಷೆಯನ್ನು ಸಿದ್ಧಪಡಿಸುವ ಪ್ರಕ್ರಿಯೆ ನಡೆಯುತ್ತಿದ್ದು ಆದಷ್ಟು ಬೇಗ ಅಂತಿಮಗೊಳಿಸಲು (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು) ಸೂಚಿಸಿದರು” ಎಂದು ಹೇಳಿದ್ದಾರೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ವ್ಯಾಖ್ಯೆಯಲ್ಲಿ ‘ಜವಾಬ್ದಾರಿ ನಕ್ಷೆ’ಯು ಸೇರ್ಪಡೆಗೊಂಡಿದೆ. ಅಲ್ಲದೇ ಕಾಯಿದೆಯಲ್ಲಿ ಅನ್ವಯವಾಗುವ ಹಾಗೂ ಅಗತ್ಯವಿರುವ ಪ್ರಕರಣಗಳಲ್ಲಿ ‘ಜವಾಬ್ದಾರಿ ನಕ್ಷೆಗೆ ಅನುಗುಣವಾಗಿ’ ಎಂದು ಉಲ್ಲೇಖಿಸಲಾಗಿದೆ. ವಿಷಾಧಕರ ಸಂಗತಿಯೆಂದರೆ ಗೆಜೆಟ್ ಅಧಿಸೂಚನೆಯಲ್ಲಿ ಜವಾಬ್ದಾರಿ ನಕ್ಷೆಯನ್ನು ನಿಯಮವಾಗಿ ಕಾಯಿದೆಯ ಭಾಗವಾಗಿ ಸೇರಿಸುವಲ್ಲಿ ಲೋಪವಾಗಿದೆ. ತಳಮಟ್ಟದಲ್ಲಿ ಚರ್ಚೆ-ಸಂವಾದಗಳನ್ನು ನಡೆಸಿ ತ್ರಿಸ್ಥರ ಪಂಚಾಯತ್‌ಗಳ ಜವಾಬ್ದಾರಿಯನ್ನು ಸ್ಪಷ್ಟವಾಗಿ, ವಿವರವಾಗಿ ಹೇಳುವ ಈಗಾಗಲೇ ಇರುವ ಜವಾಬ್ದಾರಿ ನಕ್ಷೆಯನ್ನು ಕಾಯ್ದೆಯ ಭಾಗವಾಗಿ ಮಾಡುವುದನ್ನು ಬಿಟ್ಟು ಕೇವಲ ಅಧಿಕಾರಿಗಳ ಹಂತದಲ್ಲಿ ಹೊಸದಾಗಿ ಜವಾಬ್ದಾರಿ ನಕ್ಷೆಯನ್ನು ಪುರ‍್ರಚಿಸುವ ಈ ಪ್ರಕ್ರಿಯಯೆನ್ನು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ಖಂಡಿಸುತ್ತದೆ.

Click here

Click here

Click here

Click Here

Call us

Call us

ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ಪ್ರಜಾಪ್ರಭುತ್ವದ ವಿಕೇಂದ್ರೀಕರಣಕ್ಕೆ ದಕ್ಕೆ ಉಂಟುಮಾಡುವ, ನೈಜ ಪ್ರಜಾಪ್ರಭುತ್ವದ ಸಾಕಾರಕ್ಕೆಂದೇ ಇರುವ ಗ್ರಾಮ ಸಭೆಯ ಹಕ್ಕು ಮತ್ತು ಅಧಿಕಾರಗಳು ಹಾಗೂ ಗ್ರಾಮ ಪಂಚಾಯತ್‌ಗಳು ಸ್ಥಳೀಯ ಸ್ವಯಂ ಸರ್ಕಾರವಾಗಿ ಕಾರ್ಯನಿರ್ವಹಿಸಲು ಅಡ್ಡಿಯುಂಟು ಮಾಡುವ ಸರ್ಕಾರದ ಎಲ್ಲಾ ಕ್ರಮಗಳನ್ನು ಖಂಡಿಸಿ, ಕಾಲಕಾಲಕ್ಕೆ ಕಾನೂನಾತ್ಮಕ ಮತ್ತು ಅಹಿಂಸಾತ್ಮಕವಾದ ವಿವಿಧ ಹೋರಾಟಗಳ ಮೂಲಕ ಸರ್ಕಾರದ ನಡೆಗಳನ್ನು ಪ್ರಶ್ರಿಸುತ್ತಾ ಬಂದಿದೆ. ಆದರೂ ಸಹ ಸರ್ಕಾರ ತನ್ನ ನಿರ್ಣಯಗಳಿಂದ ಹಿಂದೆ ಸರಿಯದೇ, ಈಗ ಇರುವ ಪ್ರಬಲ ಕಾಯ್ದೆಯನ್ನು ತಿದ್ದುಪಡಿಯ ಮೂಲಕ ಪುನಃ ದುರ್ಬಲಗೊಳಿಸಲು ಮುಂದಾಗಿದೆ. ಸರ್ಕಾರ ಕೈಗೊಳ್ಳುತ್ತಿರುವ ಈ ಎಲ್ಲಾ ಪ್ರಯತ್ನಗಳು ಸಂವಿಧಾನಾತ್ಮಕವಾಗಿ ನೀಡಿದ ಕಾಯ್ದೆಯ ಅಂಶಗಳ ಸ್ಪಷ್ಟ ಉಲ್ಲಂಘನೆ. ಇದೆಲ್ಲದರ ದುಷ್ಪರಿಣಾಮವನ್ನು ಅನುಭವಿಸುವುದು ಹಕ್ಕುಗಳಿಂದ ವಂಚಿತರಾಗಿರುವ ಗ್ರಾಮ ಸಭೆ ಹಾಗೂ ಅಧಿಕಾರ ಕಳೆದುಕೊಂಡು ಹೆಸರಿಗಷ್ಟೇ ಸ್ಥಳೀಯ ಸ್ವಯಂ ಸರ್ಕಾರವೆಂದು ಕರೆಯಲ್ಪಡುವ ಗ್ರಾಮ ಸರ್ಕಾರವೆನ್ನುವುದು ದುರದೃಷ್ಟಕರ.

ಗ್ರಾಮ ಪಂಚಾಯತ್ ಪ್ರತಿನಿಧಿಗಳಾಗಿ, ಗ್ರಾಮ ಸಭಾ ಸದಸ್ಯರಾಗಿ ಈ ಮೇಲಿನ ಎಲ್ಲಾ ಪ್ರಯತ್ನಗಳನ್ನು ಒಗ್ಗಟ್ಟಾಗಿ, ಪ್ರಬಲವಾಗಿ ವಿರೋಧಿಸಬೇಕಾದ ಅನಿವಾರ್ಯತೆ ಹಾಗೂ ಅಗತ್ಯತೆ ಇದೆ. ಗ್ರಾಮ ಪಂಚಾಯತ್‌ಗಳು ಗ್ರಾಮ ಸರ್ಕಾರವಾಗಿ ಕಾರ್ಯ ನಿರ್ವಹಿಸಬೇಕೇ ಹೊರತು ರಾಜ್ಯ ಸರ್ಕಾರದ ದಲ್ಲಾಳಿಗಳಾಗಲ್ಲ. ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಸಂವಿಧಾನದಆಶಯಕ್ಕೆ ಚ್ಯುತಿ ತರುವಂತಹ ಇಂತಹ ಪ್ರಯತ್ನಗಳನ್ನು ತೀವ್ರವಾಗಿ ಖಂಡಿಸುತ್ತದೆ. ಸರ್ಕಾರವು ಈ ಎಲ್ಲಾ ನಡೆಗಳಿಂದ ತಕ್ಷಣವೇ ಹಿಂದೆ ಸರಿಯಬೇಕು ಎಂದು ಒತ್ತಾಯ ಮಾಡುತ್ತಿದೆ.

One thought on “ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ: ಗ್ರಾಮ ಸ್ವರಾಜ್ಯದ ಸ್ಥಾಪನೆಗೆ ಸರ್ಕಾರದಿಂದಲೇ ಅಡ್ಡಗಾಲು!

  1. ಧನ್ಯವಾದಗಳು. ವಿವರವಾಗಿ ಪ್ರಕಟ ಮಾಡಿದ್ದಕ್ಕೆ.

Leave a Reply