ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ: ಗಂಗೊಳ್ಳಿಯ ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರ ಸಂಘಕ್ಕೆ ಮುಂದಿನ ಐದು ವರ್ಷ ಅವಧಿಗೆ ಅಧ್ಯಕ್ಷರಾಗಿ ಸದಾಶಿವ ಖಾರ್ವಿ ಕಂಚುಗೋಡು ಮತ್ತು ಉಪಾಧ್ಯಕ್ಷರಾಗಿ ಸೂರಜ್ ಖಾರ್ವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಸಭಾಂಗಣದಲ್ಲಿ ಬುಧವಾರ ಬೆಳಿಗ್ಗೆ ಜರಗಿದ ಅಧ್ಯಕ್ಷ/ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸಂದರ್ಭ ಅಧ್ಯಕ್ಷ ಸ್ಥಾನಕ್ಕೆ ಸದಾಶಿವ ಖಾರ್ವಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸೂರಜ್ ಖಾರ್ವಿ ನಾಮಪತ್ರ ಸಲ್ಲಿಸಿದ್ದರಿಂದ ಇವರಿಬ್ಬರು ಕ್ರಮವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಸಹಕಾರ ಸಂಘಗಳ ಹಿರಿಯ ನಿರೀಕ್ಷಕ ಸುನೀಲ್ ಕುಮಾರ್ ಸಿ.ಎಂ. ಘೋಷಿಸಿದರು.
ಮಾ.1ರಂದು ನಡೆದಿದ್ದ ಸಂಘದ ಮುಂದಿನ ಐದು ವರ್ಷ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಸದಾಶಿವ ಖಾರ್ವಿ ಸಾಮಾನ್ಯ ಕ್ಷೇತ್ರದಿಂದ ಚುನಾಯಿತರಾಗಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಿಜೆಪಿಯ ಸಕ್ರೀಯ ಕಾರ್ಯಕರ್ತರಾಗಿರುವ ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಡಲ ಕಾರ್ಯವಾಹರಾಗಿ, ಬಿಜೆಪಿ ತ್ರಾಸಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಬಿಜೆಪಿ ಬೈಂದೂರು ಮಂಡಲದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಥಮ ಬಾರಿಗೆ ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿರುವ ಇವರು ಚೊಚ್ಚಲ ಪ್ರಯತ್ನದಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಂಘದ ನಿರ್ದೇಶಕರಾದ ಹರೀಶ ಖಾರ್ವಿ, ಚಂದ್ರ ಖಾರ್ವಿ, ಮೋಹನ ಖಾರ್ವಿ, ಗುರುರಾಜ್ ಖಾರ್ವಿ, ನಾಗ ಖಾರ್ವಿ, ರಾಜೇಶ ಸಾರಂಗ್, ಜ್ಯೋತಿ ಆರ್. ಮತ್ತು ಸರೋಜಿನಿ ಹಾಗೂ ಸಂಘದ ವ್ಯವಸ್ಥಾಪಕ ಮೋಹನ ಖಾರ್ವಿ ಉಪಸ್ಥಿತರಿದ್ದರು.
ಒಟ್ಟು 11 ನಿರ್ದೇಶಕ ಸ್ಥಾನದ ಆಡಳಿತ ಮಂಡಳಿಯ 10 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಪರಿಶಿಷ್ಟ ಜಾತಿ ಸ್ಥಾನದಿಂದ ಸುಮತಿ ಅವಿರೋಧವಾಗಿ ಆಯ್ಕೆಯಾಗಿದ್ದರು.