ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಪೊಲೀಸ್ ಉಪವಿಭಾಗ ವ್ಯಾಪ್ತಿಯಲ್ಲಿ ಕೋವಿಡ್-19 (ಕೊರೋನಾ ವೈರಸ್) ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕುಂದಾಪುರ ಎಎಸ್ಪಿ ಹರಿರಾಂ ಶಂಕರ್, ಎಸಿ ರಾಜು ಕೆ., ತಾಲೂಕು ಆರೋಗ್ಯಾಧಿಕಾರಿ ನಾಗಭೂಷಣ್ ಅವರು ನೇತೃತ್ವದಲ್ಲಿ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿಯಲ್ಲಿ ಕುಂದಾಪುರ ರ‍್ಯಾಪಿಡ್ ಆಕ್ಷನ್ ತಂಡದ ಸಭೆ ನಡೆ ನಡೆಸಲಾಯಿತು.
ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಹೋಮ್ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳ ಮನೆಗೆ ಆರೋಗ್ಯ ತಪಾಸಣಾ ತಂಡದೊಂದಿಗೆ ಪೊಲೀಸ್ ಸಿಬ್ಬಂಧಿಗಳು ತೆರಳುವುದು. ಹೋಮ್ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳ ಮನೆಯ ಎದುರು ಮುದ್ರಿತ ಭಿತ್ತಿಪತ್ರವನ್ನು ಅಂಟಿಸುವುದು. ಕೊರೋನಾ ವೈರಸ್ ಶಂಕಿತ ವ್ಯಕ್ತಿಗಳ ಮನೆಗಳಿಗೆ ತೆರಳಿದ ಸಮಯದಲ್ಲಿ ಅವರು ಮನೆಯಲ್ಲಿ ಇಲ್ಲದಿರುವುದು ಕಂಡುಬಂದರೆ ಅಂತವರ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸುವುದು. ಯಾವುದಾದರೂ ವ್ಯಕ್ತಿಗಳ ಬಗ್ಗೆ ಕರೋನಾ ಸೊಂಕಿನ ಬಗ್ಗೆ ಸಂಶಯವಿದ್ದಲ್ಲಿ ತಾಲೂಕು ಆರೋಗ್ಯ ಅಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸುವುದು. ಸೇವೆಯಲ್ಲಿರುವ ಅಧಿಕಾರಿ, ಸಿಬ್ಬಂಧಿ ಹೊರತುಪಡಿಸಿ ಬೇರೆ ವ್ಯಕ್ತಿಗಳು ಓಡಾಟ ನಡೆಸದಂತೆ ನೋಡಿಕೊಳ್ಳುವುದು, ಅಗತ್ಯ ವಸ್ತುಗಳ ಸಾಗಾಟ ವಾಹನ ಹೊರತುಪಡಿಸಿ ಬೇರೆ ವಾಹನ ಚೆಕ್‌ಪೋಸ್ಟ್ ಒಳಕ್ಕೆ ಬರದಂತೆ ನೋಡಿಕೊಳ್ಳುವುದು, ರಸ್ತೆ ಬದಿಯಲ್ಲಿ ಯಾವುದೇ ವಸ್ತುಗಳ ಮಾರಾಟ ಮಾಡದಂತೆ ನೋಡಿಕೊಳ್ಳುವುದು, ಕರ್ತವ್ಯದಲ್ಲಿರುವ ಎಲ್ಲಾ ಅಧಿಕಾರಿ, ಸಿಬ್ಬಂಧಿಗಳು ತಪ್ಪದೇ ಮಾಸ್ಕ್ ಧರಿಸುವುದು ಮತ್ತು ಕುಂದಾಪುರ ಉಪವಿಭಾಗದಲ್ಲಿ ಸಂಪೂರ್ಣ ಲಾಕ್‌ಡೌನ್ ಆಗುವಂತೆ ಮಾಡುವ ಮೂಲಕ ಕರೋನಾ ವೈರಸ್ ಹರಡದಂತೆ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸುವ ಬಗ್ಗೆ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರದ ಬೈಂದೂರು ತಾಲೂಕಿನಲ್ಲಿ ಪೊಲೀಸರಿಂದ ಕಾರ್ಯಾಚರಣೆ, ತಿರುಗಾಡುತ್ತಿದ್ದವರಿಗೆ ಎಚ್ಚರಿಕೆ:
ಮಂಗಳವಾರ ಬೆಳಿಗ್ಗೆಯಿಂದಲೇ ಕುಂದಾಪುರ ಉಪವಿಭಾಗದ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿದರು. ತುರ್ತು ಸೇವೆಗಳ ಅಂಗಡಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳನ್ನು ಮುಚ್ಚಿಸಿದರು. ರಸ್ತೆಯಲ್ಲಿ ವಿವಿಧ ವಾಹನಗಳಲ್ಲಿ ತಿರುಗಾಡುತ್ತಿದ್ದವರನ್ನು ತಡೆದು ನಿಲ್ಲಿಸಿ ಅನಗತ್ಯವಾಗಿ ಸಂಚಾರ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದುದು ಕಂಡುಬಂತು. ಹೋಮ್ ಕ್ವಾರಂಟೈನ್‌ನಲ್ಲಿ ಇದ್ದವವರ ಮನೆಗಳಿಗೆ ತೆರಳಿ ಬಿತ್ತಿಪತ್ರ ಅಂಟಿಸಿ ವಿಚಾರಣೆ ನಡೆಸಿದರು. ವ್ಯಕ್ತಿಯಿಂದ ವ್ಯಕ್ತಿಗೆ ಅಂತರ ಕಾಯ್ದುಕೊಳ್ಳಲು ಅಂಗಡಿಗಳ ಎದುರು ಮಾರ್ಕ್ ಮಾಡಲಾಗಿದೆ. ಉಳಿದಂತೆ ಬಹುಪಾಲು ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ತರಕಾರಿ ಅಂಗಡಿ, ಮೆಡಿಕಲ್ ಮುಂತಾದ ತುರ್ತು ಅಗತ್ಯ ಸಾಮಾಗ್ರಿಗಳ ಅಂಗಡಿ ಎದುರು ಜನರು ನಿಂತಿರುವುದು ಕಂಡುಬಂತು./ ಕುಂದಾಪ್ರ ಡಾಟ್ ಕಾಂ ಸುದ್ದಿ./