ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದೇಶಾದ್ಯಂತ ಲಾಕ್‌ಡೌನ್ ಜಾರಿಯಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೆಚ್ಚುವರಿ ಹಾಲನ್ನು ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಅರ್ಹರಿಗೆ ವಿತರಿಸುವ ಯೋಜನೆ ಜಾರಿಗೆ ತಂದಿದ್ದು, ಬೈಂದೂರು ತಾಲೂಕು ಕಚೇರಿಯಲ್ಲಿ ಶುಕ್ರವಾರ ದ. ಕ. ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಹಾಲಿನ ಪ್ಯಾಕೇಟ್ ವಿತರಿಸಲಾಯಿತು.
ಈ ಸಂದರ್ಭ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಕಳೆದೆರಡು ದಿನಗಳಿಂದ ಹಾಲಿನ ಮಾರುಕಟ್ಟೆ ಕುಸಿಯುತ್ತಿರುವ ನೆಲೆಯಲ್ಲಿ ಉಭಯ ಜಿಲ್ಲೆಗಳಲ್ಲಿ ಒಕ್ಕೂಟ ಖರೀದಿಸಿದ ಸುಮಾರು 4,08,000 ಲೀ ಹಾಲಿನಿಂದ ಅಂದಾಜು 3.5 ಲಕ್ಷ ಲೀ. ಹಾಲು ಮೊಸರು, ಮಜ್ಜಿಗೆ ರೂಪದಲ್ಲಿ ಮಾರಾಟವಾಗಿದ್ದು, ಸುಮಾರು ಒಂದು ಲಕ್ಷ ಲೀ. ಹಾಲು ಮಾರುಕಟ್ಟೆಯ ಸಮಸ್ಯೆ ಎದುರಿಸುತ್ತಿದೆ. ಕಳೆದ ಒಂದು ವಾರದ ಹಿಂದೆ ಸುಮಾರು 6 ಲಕ್ಷ ಲೀ ಹಾಲು ಸಂಗ್ರಹವಾಗಿದ್ದು, ಪೌಡರ್ ಮಾಡಿ ಪರಿವರ್ತಿಸಲೂ ಸಾಧ್ಯವಾಗದೇ ಒಂದುವರೆ ದಿನ ಹಾಲನ್ನು ನಿಲ್ಲಿಸಬೇಕಾದ ಪರಿಸ್ಥಿತಿ ಉಂಟಾಗಿತ್ತು. ಒಂದು ದಿನ 4.10ಲಕ್ಷ ಲೀ. ಹಾಲನ್ನು ರೈತರು ಒದಗಿಸುತ್ತಿದ್ದು, ಇದರಿಂದ ರೈತರಿಗೆ ಕೊಡುವ ಸುಮಾರು 1.60 ಕೋಟಿ ಹಣ ನಷ್ಟವಾಗಿದೆ. ರಾಜ್ಯದಲ್ಲಿ ಇಂತಹ ಹಲವಾರು ಒಕ್ಕೂಟದ ಸ್ಥಿತಿಯನ್ನು ಮನಗೊಂಡು ಮುಖ್ಯಮಂತ್ರಿಗಳು ರೈತರ ಹಿತದೃಷ್ಠಿಯಿಂದ ಮತ್ತು ಅವರಿಗೆ ಅನುಕೂಲವಾಗುವ ನೆಲೆಯಲ್ಲಿ ಪೌಷ್ಠಿಕಾಂಶಯುಕ್ತ ಹಾಲನ್ನು ರಾಜ್ಯಾದ್ಯಂತ ಹೊಸ ಯೋಜನೆ ಮೂಲಕ ಕೂಲಿ ಕಾರ್ಮಿಕರು, ಬಡವರಿಗೆ ವಿತರಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮ ಶ್ಲಾಘನೀಯವಾಗಿದೆ ಎಂದರು.
ನಮ್ಮ ಒಕ್ಕೂಟದಿಂದ ತಲಾ ಐದು ಸಾವಿರ ಲೀ. ಹಾಲನ್ನು ಉಡುಪಿ ಮತ್ತು ದ.ಕ. ಜಿಲ್ಲೆಗೆ ಜಿಲ್ಲಾಡಳಿತದ ಮೂಲಕ ಸರಬರಾಜು ಮಾಡುತ್ತಿದ್ದೇವೆ. ಆಯಾ ತಾಲೂಕು ಆಡಳಿತ ಅದನ್ನು ಸರ್ಕಾರದ ಆದೇಶದಂತೆ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರಿಗೆ, ಬಡವರು ಸೇರಿದಂತೆ ಅರ್ಹರಿಗೆ ವಿತರಿಸುತ್ತದೆ. ಇದರಿಂದ ಒಕ್ಕೂಟ, ರೈತರು ಮತ್ತು ತೀರಾ ಸಂಕಷ್ಟದಲ್ಲಿರುವ ಕೂಲಿಕಾರ್ಮಿಕರಿಗೆ ತುಂಬಾ ಅನುಕೂಲವಾಗುತ್ತಿದೆ. ಈ ರೀತಿಯಾಗಿ ದೇಶದಲ್ಲಿಯೇ ನಮ್ಮ ರಾಜ್ಯ ಸರ್ಕಾರ ವಿಶೇಷ ಯೋಜನೆ ಜಾರಿಗೊಳಿಸಿರುವುದು ಒರ್ವ ರೈತನಾಗಿ, ಒಕ್ಕೂಟದ ಉಪಾಧ್ಯಕ್ಷನಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಇವರನ್ನು ಅಭಿನಂದಿಸುತ್ತೇನೆ. ಜತೆಗೆ ಅರ್ಹ ಫಲಾನುಭವಿಗಳಿಗೆ ಸಿಗುವಂತೆ ಸ್ಥಳಿಯಾಡಳಿತ ಈ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡುತ್ತೇನೆ ಎಂದರು.
ಉಪ ತಹಶೀಲ್ದಾರ ನರಸಿಂಹ ಕಾಮತ್, ಕಂದಾಯ ಅಧಿಕಾರಿ ಈ. ಕುಮಾರ್ ಸೇರಿದಂತೆ ಗ್ರಾಮಲೆಕ್ಕಿಗರು, ಕಂದಾಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.