ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಪ್ರಸ್ತುತ ಕೊವೀಡ್ 19 ಪರೀಕ್ಷೆಗಾಗಿ ಸ್ಯಾಂಪಲ್‌ಗಳು ಬೇರೆ ಜಿಲ್ಲೆಗೆ ಹೋಗುತ್ತಿದ್ದು, ಎಸ್.ಡಿ.ಆರ್.ಎಫ್ ಫಂಡ್‌ನಲ್ಲಿ ಟೆಸ್ಟ್ ಲ್ಯಾಬ್ ನಿರ್ಮಾಣಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ. ಎಪ್ರಿಲ್ ತಿಂಗಳ ಅಂತ್ಯದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಲ್ಯಾಬ್ ಪ್ರಾರಂಭಿಸಲು ಯೋಜಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಅವರು ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳನು ಉದ್ದೇಶಿಸಿ ಮಾತನಾಡಿ ರಾಜ್ಯದಲ್ಲಿ ಈಗಾಗಲೆ 17 ಟೆಸ್ಟ್ ಲ್ಯಾಬ್ ಆರಂಭಿಸಿದ್ದೇವೆ. ಕೋವಿಡ್ ಆರಂಭದಲ್ಲಿ ಕೇವಲ 2 ಟೆಸ್ಟ್ ಲ್ಯಾಬ್ ಇತ್ತು. ಎಪ್ರಿಲ್ ಅಂತ್ಯದಲ್ಲಿ ಮತ್ತೆ 10ಲ್ಯಾಬ್‌ಗಳು ಆರಂಭವಾಗಲಿದ್ದು ಈ ಸಂದರ್ಭ ಉಡುಪಿ ಜಿಲ್ಲೆಯಲ್ಲೂ ಲ್ಯಾಬ್ ಆರಂಭಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಬಂದಿದ್ದ ಮೂರು ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 110ಮಂದಿಯ ಟೆಸ್ಟ್ ರಿಪೋರ್ಟ್ ಬರಲು ಬಾಕಿ ಇದೆ. ಒಟ್ಟು 3300 ಜನ ಕ್ವಾರಂಟೈನ್‌ನಲ್ಲಿದ್ದು 993 ಜನ ಟೆಸ್ಟ್ ಮಾಡಿಕೊಂಡಿದ್ದಾರೆ. ಅದರಲ್ಲಿ 990 ನೆಗಟಿವ್ ಇದೆ. ಉಳಿದ ಟೆಸ್ಟ್ ರಿಪೋರ್ಟ್ ಒಂದೆರೆಡು ದಿನಗಳಲ್ಲಿ ನಮ್ಮ ಕೈ ಸೇರಲಿವೆ. ಉಳಿದ 110ಮಂದಿಯದ್ದು ಕೂಡ ನೆಗೆಟಿವ್ ಬರುವ ನಿರೀಕ್ಷೆ ಇದ್ದು, ಜಿಲ್ಲೆ ಸದ್ಯದಲ್ಲೇ ಗ್ರೀನ್ ಜೋನ್ ಪಟ್ಟಿಯಲ್ಲಿ ಸೇರುವ ಸಾಧ್ಯತೆ ಇದೆ. ಎಂದರು.
ಸುಮಾರು 306 ಜನರಲ್ಲಿ 254 ಜನ ಐಸೋಲೇಶನ್‌ನಿಂದ ಹೊರ ಬಂದಿದ್ದಾರೆ. 52 ಮಂದಿ ಐಸೋಲೇಶನ್‌ನಲ್ಲಿ ಇದ್ದಾರೆ. ಒಟ್ಟು 2325 ಜನ 14 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ. 1892 ಮಂದಿ 28ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ ಆಡಳಿತಾತ್ಮಕವಾದ ಹಾಗೂ ಮೆಡಿಕಲ್ ವಿಭಾಗದಿಂದ ಚರ್ಚಿಸಿ ಜಿಲ್ಲೆಯಲ್ಲಿ ಹಲವು ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ. ಕನಿಷ್ಟ 50 ಬೆಡ್‌ಗಳಿಗೆ ಸೆಂಟ್ರಲೈಸ್ಡ್ ಆಕ್ಸಿಜನ್ ಸಪ್ಲೈ ಮಾಡುವ ವ್ಯವಸ್ಥೆಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಮಾಡಿಕೊಂಡಿದ್ದೇವೆ. ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ 5 ರಿಂದ 10 ಬೆಡ್‌ಗಳಲ್ಲಿ ಸೆಂಟ್ರಲೈಸ್ಡ್ ಆಕ್ಸಿಜನ್ ವ್ಯವಸ್ಥೆ ಇದೆ. ಸೆಂಟ್ರಲೈಸ್ಡ್ ಆಕ್ಸಿಜನ್‌ನಿಂದ ಕೋವಿಡ್ ಪೇಶಂಟ್ ಎಂತಹ ಸ್ಥಿತಿಯಲ್ಲಿದ್ದರೂ ಪ್ರಾಥಮಿಕ ಹಂತಕ್ಕೆ ತರಿಸಿ ಚಿಕಿತ್ಸೆ ನೀಡಲು ಸಾಧ್ಯವಿದೆ. ನಮಗೆ ಇನ್ನಷ್ಟು ಪಿಪಿಐ ಕಿಟ್‌ಗಳು ಬರಬೇಕು. ಸುಮಾರು 3,500 ಪಿಪಿಐ ಕಿಟ್‌ಗಳನ್ನು ಒದಗಿಸುವುದಕ್ಕೆ ರಾಜ್ಯಮಟ್ಟದ ಅಧಿಕಾರಿಗಳಿಗೆ ಸೂಚಿಸಿ ತರಿಸುವ ವ್ಯವಸ್ಥೆ ಮಾಡುತ್ತೇವೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಹೊರ ಜಿಲ್ಲೆಗಳಿಂದ ಯಾರೂ ಈ ಜಿಲ್ಲೆಯೊಳಗೆ ಬರುವಂತಿಲ್ಲ. ಮೆಡಿಕಲ್ ತುರ್ತು ನೆಪದಲ್ಲಿ ಯಾರೂ ಬರಬಾರದು. ಯಾರು ಎಷ್ಟೇ ಒತ್ತಡ ಹೇರಿದರೂ ಬಿಡುವಂತಿಲ್ಲ ಎಂದು ಸೂಚಿಸಲಾಗಿದೆ. ಮೆಡಿಕಲ್‌ಗೆ ತೀರ ಅವಶ್ಯಕತೆ ಇದ್ದಲ್ಲಿ ಪರೀಕ್ಷಿಸಿ ಬಿಡಬೇಕು. ಮೇ.೩ರ ನಂತರವೂ ಜಿಲ್ಲೆಯೊಳಗೆ ಬಿಟ್ಟುಕೊಳ್ಳುವ ಬಗ್ಗೆ ಯಾವ ತೀರ್ಮಾನವೂ ಆಗಿಲ್ಲ. ನಿರ್ಬಂಧಗಳನ್ನು ಸಡಿಲಿಕೆ ಮಾಡಬೇಕು ಎಂಬ ಬೇಡಿಕೆಯನ್ನು ಜನರು ಶಾಸಕರ ಮೂಲಕ ಒತ್ತಡ ಹೇರುತ್ತಿದ್ದಾರೆ. ರಾಜ್ಯದ ೧೧ ಗ್ರೀನ್ ಜೋನ್ ಜಿಲ್ಲೆಗಳಿಗೆ ಕೆಲವು ರಿಯಾಯಿತಿ ಕೊಟ್ಟಿದ್ದೇವೆ. ಉಡುಪಿ ಜಿಲ್ಲೆ ಗ್ರೀನ್ ಜೋನ್ ಆದ ಮೇಲೆ ಕೇಂದ್ರದ ಮಾರ್ಗಸೂಚಿಯಂತೆ ಮುಂದೆ ಕೆಲವು ಸಡಿಲಿಕೆ ಮಾಡಲಾಗುವುದು. ಸ್ಥಳಿಯ ಕೃಷಿ ಕಸುಬುಗಳಿಗೆ, ಮೀನುಗಾರಿಕೆಗೆ ತೊಂದರೆಯಾಗದಂತೆ ಈಗಾಗಲೆ ಕೆಲವು ಸೂಚನೆಗಳನ್ನು ನೀಡಲಾಗಿದೆ.ಲಾಕ್‌ಡೌನ್ ಸಡಿಲಿಕೆ ಮಾಡಿದ್ದರಿಂದ ಕೊರೋನಾ ಹರಡುವಿಕೆಗೆ ಮತ್ತೆ ಅವಕಾಶ ಮಾಡಿಕೊಟ್ಟಂತೆ ಆಗುವುದೇ ಎಂಬ ಪ್ರಶ್ನೆಗೆ ಅನಾವಶ್ಯಕವಾಗಿ ಯಾರಿಗೂ ಓಡಾಡಲು ಬಿಡಲ್ಲ. ಒಳ ರಸ್ತೆಗಳನ್ನು ಬಂದ್ ಮಾಡಲಾಗುವುದು. ಮುಖ್ಯ ರಸ್ತೆಗಳಲ್ಲಿ ಮಾತ್ರ ಓಡಾಡಬಹುದು. ಒಂದು ವೇಳೆ ಪುನಃ ಕೊರೋನ ಕಾಣಿಸಿಕೊಳ್ಳುವ ಸಂದರ್ಭ ಬಂದಲ್ಲಿ ಕೇಂದ್ರ ಸರ್ಕಾರ ಸಡಿಲಿಕೆ ಹಿಂಪಡೆಯಲಿದೆ. ಆದ್ದರಿಂದ ಜನ ಗಂಭೀರತೆಯನ್ನು ಅರಿತುಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ಕೆಲಸ ಮಾಡಬೇಕು ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋವಿಡ್ ವಿರುದ್ಧ ಹೋರಾಡುತ್ತಿರುವ ವೈದ್ಯರು ಕೆಲಸ ಮಾಡುತ್ತಲೇ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸುತ್ತಿರುವುದು ಸೀರಿಯಸ್ ಮ್ಯಾಟರ್ ಆಗಿದ್ದು ಈ ಕುರಿತು ಗಮನ ಹರಿಸಲಾಗುವುದು ಎಂದರು. ಕೋವಿಡ್ ವಾರಿಯರ‍್ಸ್ ವಿರುದ್ಧ ಹೋರಾಡುತ್ತಿರುವವರಿಗೆ ಹಲ್ಲೆ ನಡೆಸಿದವರ ವಿರುದ್ಧ ಕೇಂದ್ರದ ಸುಗ್ರಿವಾಜ್ಞೆ ಬರುವ ಮೊದಲೇ ಕೇರಳ, ಉತ್ತರ ಪ್ರದೇಶ, ಕರ್ನಾಟಕ ರಾಜ್ಯ ಸರ್ಕಾರಗಳು ಕಠಿಣ ಕ್ರಮ ಜರುಗಿಸಿವೆ. ಪಾದರಾಯನಪುರದ ಪ್ರಕರಣದಲ್ಲಿ ಎಂಟ್ಹತ್ತು ಸೆಕ್ಷನ್ ಹಾಕಿ ಕೇಸು ದಾಖಲಿಸಿದ್ದೇವೆ. ನ್ಯಾಶನಲ್ ಡಿಸಾಸ್ಟರ್ ಆಕ್ಟ್ (ರಾಷ್ಟ್ರೀಯ ವಿಪತ್ತು ಕಾಯ್ದೆ) ಅನ್ವಯ ನ್ಯಾಯಾಧೀಶರ ಪರವಾನಿಗೆ ಪಡೆದು ಕೇಸು ಹಾಕಲಾಗಿದೆ. ಚಾರ್ಜ್‌ಶೀಟ್ ಹಾಕದೇ ಇರುವುದರಿಂದ ಸುಗ್ರಿವಾಜ್ಞೆ ಗಮನಿಸಿಕೊಂಡು ಚಾರ್ಜ್‌ಶೀಟ್ ಹಾಕಲಾಗುವುದು ಎಂದರು.
ಈ ಸಂದರ್ಭ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಮೆಂಡನ್, ರಘುಪತಿ ಭಟ್, ಸುನಿಲ್ ಕುಮಾರ್, ಬಿ. ಎಂ. ಸುಕುಮಾರ ಶೆಟ್ಟಿ, ಜಿಲ್ಲಾಧಿಕಾರಿ ಜಿ. ಜಗದೀಶ್, ಎಸ್ಪಿ ವಿಷ್ಣುವರ್ಧನ್ ಹಾಗೂ ಇತರರು ಉಪಸ್ಥಿತರಿದ್ದರು. /ಕುಂದಾಪ್ರ ಡಾಟ್ ಕಾಂ ಸುದ್ದಿ./